ಚಾಮರಾಜನಗರ : ಜಿಲ್ಲೆಯಲ್ಲಿರುವ ಜಲಾಶಯಗಳು ಭರ್ತಿಯಾಗೋದೆ ತಮಿಳುನಾಡಿನಲ್ಲಿ ಉತ್ತಮ ಮಳೆಯಾದ್ರೆ.
ಅಸನಿ ಚಂಡಮಾರುತದ ಎಫೆಕ್ಟ್ನಿಂದಾಗಿ ತಮಿಳುನಾಡಿನ ದಿಂಬಂ, ತಾಳವಾಡಿಯಲ್ಲಿ ಉತ್ತಮ ಮಳೆ ಬಿದ್ದಿದೆ. ಈ ಹಿನ್ನೆಲೆ ಹಲವು ದಶಕದ ಬಳಿಕ ಅಕ್ಟೋಬರ್, ನವೆಂಬರ್ನಲ್ಲಿ ಭರ್ತಿಯಾಗ್ತಿದ್ದ ಅವಳಿ ಜಲಾಶಯಗಳು ಮೇ ನಲ್ಲೇ ಭರ್ತಿಯಾಗಿದೆ.
ಚಾಮರಾಜನಗರದ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯ ಹಿಂದೆಲ್ಲಾ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಡ್ಯಾಂಗಳು ಭರ್ತಿಯಾಗುತ್ತಿದ್ದವು. ಆದರೆ ಈ ವರ್ಷ ಮೇ ತಿಂಗಳಲ್ಲೇ ಡ್ಯಾಂ ಭರ್ತಿಯಾಗಿದ್ದು ಜಲ ವೈಭವ ವೀಕ್ಷಣೆಗೆ ಸಾರ್ವಜನಿಕರು ಬರುತ್ತಿದ್ದಾರೆ.
ಕರ್ನಾಟಕಕ್ಕೆ ಸೇರಿರುವ ಬೇಡಗುಳಿ, ತಮಿಳುನಾಡಿನ ದಿಂಬಂ, ಹಾಸನೂರು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಜಲಾಶಯಗಳಿಗೆ ಜೀವಕಳೆ ತಂದಿದೆ. ಸುವರ್ಣಾವತಿ ಜಲಾಶಯದ ನೀರು ಸಂಗ್ರಹಣದ ಗರಿಷ್ಠ ಮಟ್ಟ 2,455 ಅಡಿ. ಎರಡು ಅಡಿ ಬಾಕಿಯಿದ್ದು, ಬಹುತೇಕ ಭರ್ತಿ ಹಂತದಲ್ಲಿದೆ.
ಅದೇ ರೀತಿ ಚಿಕ್ಕಹೊಳೆ 2,449 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಭರ್ತಿಯಾಗಿದೆ. ಸುವರ್ಣಾವತಿ ಜಲಾಶಯ 6,400 ಎಕರೆ ಹಾಗೂ ಚಿಕ್ಕಹೊಳೆ 4,000 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಅಸನಿ ಚಂಡಮಾರುತದಿಂದ ಹವಾಮಾನದಲ್ಲಿ ಉಂಟಾದ ಬದಲಾವಣೆಯಿಂದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮಳೆ ಸುರಿದಿದ್ದು, ಜಲಾಶಯಗಳು ನಳನಳಿಸುತ್ತಿವೆ.