ಬೆಕ್ಕಿಗೆ ಹುಚ್ಚು ನಾಯಿ ಕಚ್ಚಿದ್ದರಿಂದ ಬೆಕ್ಕು ರೇಬಿಸ್ ಸೋಂಕಿಗೆ ಒಳಗಾಗಿತ್ತು. ಅದಾದ ಸ್ವಲ್ಪ ದಿನದ ನಂತರ ನಾಯಿ ಸತ್ತುಹೋಗಿತ್ತು. ಆ ಇಬ್ಬರು ಮಹಿಳೆಯರಿಗೆ ಕಚ್ಚಿದ್ದ ಬೆಕ್ಕು ಕೂಡ ಕೆಲವು ದಿನಗಳ ನಂತರ ಸತ್ತುಹೋಗಿತ್ತು.ಕೃಷ್ಣಾ ಜಿಲ್ಲೆಯ ಮೊವ್ವ ಮಂಡಲದ ವೇಮುಲಮಾಡ ಎಂಬಲ್ಲಿ ಬೆಕ್ಕು (Cat) ಕಚ್ಚಿ ಇಬ್ಬರು ಮಹಿಳೆಯರು ರೇಬಿಸ್‌ನಿಂದ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ವೇಮುಲಮಾಡ ಎಸ್‌ಸಿ ಕಾಲೋನಿಯ ನಿವೃತ್ತ ಆರ್‌ಟಿಸಿ ಕಂಡಕ್ಟರ್ ಸಾಲಿ ಭಾಗ್ಯರಾವ್ ಅವರ ಪತ್ನಿ ಕಮಲಾ (64) ಹಾಗೂ ಅದೇ ಕಾಲೋನಿಯ ಆರ್‌ಎಂಪಿ ವೈದ್ಯ ಬೊದ್ದು ಬಾಬುರಾವ್ ಅವರ ಪತ್ನಿ ನಾಗಮಣಿಗೆ (43) ಎರಡು ತಿಂಗಳ ಹಿಂದೆ ಬೆಕ್ಕು ಕಚ್ಚಿತ್ತು. ಆ ಸಮಯದಲ್ಲಿ ಇಬ್ಬರೂ ಮಹಿಳೆಯರು ಟಿಟಿ ಇಂಜೆಕ್ಷನ್ ತೆಗೆದುಕೊಂಡಿದ್ದರು. ಹಾಗೇ, ಔಷಧಿಯನ್ನೂ ಪಡೆದಿದ್ದರು. ಅದಾದ ನಂತರ ಅವರ ಆರೋಗ್ಯ ಸುಧಾರಿಸಿತ್ತು.
ಈ ನಡುವೆ ನಾಲ್ಕು ದಿನಗಳ ಹಿಂದೆ ಕಮಲಾ ಮತ್ತು ನಾಗಮಣಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಚಿಕಿತ್ಸೆಗಾಗಿ ಕಾರ್ಪೊರೇಟ್ ಆಸ್ಪತ್ರೆಗೆ ತೆರಳಿದ್ದರು. ಆದರೂ ಅವರ ಆರೋಗ್ಯ ಸುಧಾರಿಸಿರಲಿಲ್ಲ. ಗುಂಟೂರು ಜಿಲ್ಲೆಯ ಮಂಗಳಗಿರಿ ಎನ್‌ಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಮಲಾಬೆಳಗ್ಗೆ 10 ಗಂಟೆಗೆ ಮೃತಪಟ್ಟಿದ್ದಾರೆ. ನಾಗಮಣಿ ಅವರಿಗೆ ಶುಕ್ರವಾರ ಪಿಎಚ್‌ಸಿಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅಲ್ಲಿನ ವೈದ್ಯರ ಸೂಚನೆಯಂತೆ ವಿಜಯವಾಡದ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ಆಕೆಯೂ ಬೆಳಗ್ಗೆ ಮೃತಪಟ್ಟಿದ್ದಾರೆ.ಮೃತರ ಪೈಕಿ ಇಬ್ಬರಿಗೆ ರೇಬಿಸ್ ಸೋಂಕು ತಗುಲಿತ್ತು ಎಂದು ವೈದ್ಯಾಧಿಕಾರಿ ಡಾ. ಶಾಂತಿ ಶಿವರಾಮ ಕೃಷ್ಣರಾವ್ ತಿಳಿಸಿದ್ದಾರೆ. ಸಕಾಲದಲ್ಲಿ ವೈದ್ಯಕೀಯ ಸೇವೆ ದೊರೆಯದ ಕಾರಣ ದೇಹ ವಿಷಪೂರಿತವಾಗಿ, ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮಹಿಳೆಯರು ರೇಬಿಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬೆಕ್ಕು ಕಚ್ಚಿದ್ದರಿಂದ ಅವರಿಬ್ಬರಿಗೂ ಸೋಂಕು ಹರಡಿದ್ದು, ಸೂಕ್ತ ಚಿಕಿತ್ಸೆ ದೊರೆಯದಿರುವುದೇ ಅವರ ಸಾವಿಗೆ ಕಾರಣವಾಗಿದೆ ಎಂದಿದ್ದಾರೆ. ಗ್ರಾಮಸ್ಥರ ಪ್ರಕಾರ, ಈ ಬೆಕ್ಕಿಗೆ ಹುಚ್ಚು ನಾಯಿ ಕಚ್ಚಿದ್ದರಿಂದ ಬೆಕ್ಕು ರೇಬಿಸ್ ಸೋಂಕಿಗೆ ಒಳಗಾಗಿತ್ತು. ಅದಾದ ಸ್ವಲ್ಪ ದಿನದ ನಂತರ ನಾಯಿ ಸತ್ತುಹೋಗಿತ್ತು. ಆ ಇಬ್ಬರು ಮಹಿಳೆಯರಿಗೆ ಕಚ್ಚಿದ್ದ ಬೆಕ್ಕು ಕೂಡ ಕೆಲವು ದಿನಗಳ ನಂತರ ಸತ್ತುಹೋಗಿತ್ತು.
ನಾಯಿ, ಬೆಕ್ಕು, ಇಲಿಗಳು ಕಚ್ಚಿದಾಗ ಆದಷ್ಟು ಕೂಡಲೇ ಚಿಕಿತ್ಸೆ ಪಡೆಯಬೇಕು. ಅದೇ ದಿನ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಕೆಲವರಿಗೆ ಪ್ರಾಣಾಪಾಯವಾಗುವ ಸಾಧ್ಯತೆಗಳಿರುತ್ತವೆ ಎಂದು ವೈದ್ಯರು ಸೂಚಿಸಿದ್ದಾರೆ.