ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ

ಸೋಮವಾರ, 27 ಸೆಪ್ಟಂಬರ್ 2021 (21:43 IST)
ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಬ್ಯಾನರ್ ಹಾಕಿದ್ದ ಗಲಾಟೆ ಪ್ರಕರಣ ಸಂಬಂಧ ದಾಖಲಿಸಿದ್ದ ಎರಡನೇ ಎಫ್ಐಆರ್ ಅ​ನ್ನು ಹೈಕೋರ್ಟ್​ ರದ್ದುಪಡಿಸಿ ಆದೇಶಿಸಿದೆ.
ಹೊಸಕೋಟೆಯ ಬಿ ವಿ ಬೈರೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧ ಹೂಡಿದ್ದ 2ನೇ ಎಫ್‌ಐಆರ್ ರದ್ದು ಮಾಡಿದೆ.
ಪೀಠ ತನ್ನ ಆದೇಶದಲ್ಲಿ ಒಮ್ಮೆ ಒಂದು ಘಟನೆಯ ಬಗ್ಗೆ ದೂರು ದಾಖಲಾದರೆ, ಅದೇ ಘಟನೆಯ ಬಗ್ಗೆ ದೂರುದಾರರು ಮತ್ತೊಂದು ದೂರನ್ನು ದಾಖಲಿಸಲಾಗದು. ಜೊತೆಗೆ ಅದೇ ಘಟನೆ ಬಗ್ಗೆ 2ನೇ ಎಫ್‌ಐಆರ್ ಅಥವಾ ಹಲವು ಎಫ್ಐಆರ್‌ಗಳನ್ನು ದಾಖಲಿಸಲು ಅವಕಾಶ ಇಲ್ಲ ಎಂದಿದೆ.
2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಏ.18ರಂದು ನಿಸಾರ್ ಆಹಮದ್ ಎಂಬುವರು ಅಮಿತ್ ಶಾ ಆಗಮನದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಅನಧಿಕೃತ ಬ್ಯಾನರ್, ಬಂಟಿಂಗ್ಸ್ ಹಾಕಿದ್ದಾರೆಂದು ದೂರು ನೀಡಿದ್ದರು. ನಂತರ ಹೊಸಕೋಟೆ ನಗರಸಭೆಯ ಆರೋಗ್ಯಾಧಿಕಾರಿ ನುಸ್ರತ್ ಬಾನು ಬ್ಯಾನರ್‌ಗಳ ತೆರವಿಗೆ ಆದೇಶಿಸಿದ್ದರು. ಆ ಬಳಿಕ ಬಿಜೆಪಿ ಕಾರ್ಯಕರ್ತರು ದೂರುದಾರರನ್ನು ಅವಾಚ್ಯ ಶಬ್ಧಗಳಲ್ಲಿ ನಿಂದಿಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ನೀಡಿದ ದೂರುಗಳ ಮೇರೆಗೆ ಎರಡು ಪ್ರತ್ಯೇಕ ಎಫ್ಐಆರ್ ದಾಖಲು ಮಾಡಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ