ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ನಾಗೇಂದ್ರ, ನಿಗಮ ಅಧ್ಯಕ್ಷ ಬಸನೌಡ ದದ್ದಲ್ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಎಸ್ಐಟಿ ತನಿಖೆ ಬೆನ್ನಲ್ಲೇ ಇಡಿ ದಾಳಿ ನಡೆಸಿದೆ.
ಇಂದು ಬೆಳಿಗ್ಗೆಯೇ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಮತ್ತು ನಿಗಮ ಅಧ್ಯಕ್ಷ ಬಸನಗೌಡ ದದ್ದಲ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ರಾಯಚೂರು ನಗರದ ಆಶಾಪುರ ರಸ್ತೆ ಮತ್ತು ಬೆಂಗಳೂರಿನ ಯಲಹಂಕದಲ್ಲಿರುವ ದದ್ದಲ್ ಮನೆ ಮೇಲೆ ಬೆಳಿಗ್ಗೆ 7 ಗಂಟೆಗೇ ಇಡಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಮಂಗಳವಾರವಷ್ಟೇ ಎಸ್ಐಟಿ ಅಧಿಕಾರಿಗಳು ದದ್ದಲ್ ರನ್ನು ವಿಚಾರಣೆಗೊಳಪಡಿಸಿದ್ದರು. ಇದರ ಬೆನ್ನಲ್ಲೇ ದದ್ದಲ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ವಾಲ್ಮೀಕಿ ಹಗರಣದಲ್ಲಿ 187 ಕೋಟಿ ರೂ. ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಇದರ ಬಗ್ಗೆ ಈಗ ಎಸ್ ಐಟಿ ವಿಚಾರಣೆ ನಡೆಸುತ್ತಿದೆ. ಈ ಹಗರಣ ರಾಜ್ಯ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿತ್ತು. ಸಚಿವರಾಗಿದ್ದ ನಾಗೇಂದ್ರ ತಲೆದಂಡವಾಗಿತ್ತು.
ಕೇವಲ ದದ್ದಲ್ ಮಾತ್ರವಲ್ಲ, ಮಾಜಿ ಸಚಿವ ನಾಗೇಂದ್ರ ಮನೆ ಮೇಲೂ ದಾಳಿ ನಡೆಸಲಾಗಿದೆ. ಹಗರಣದಲ್ಲಿ ಪ್ರಮುಖವಾಗಿ ಸಚಿವರ ಹೆಸರು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ರಾಜಕೀಯ ಒತ್ತಡಕ್ಕೆ ಮಣಿದು ನಾಗೇಂದ್ರ ರಾಜೀನಾಮೆ ನೀಡಬೇಕಾಯಿತು. ಬಳ್ಳಾರಿಯ ನೆಹರೂ ಕಾಲೊನಿಯಲ್ಲಿರುವ ನಾಗೇಂದ್ರ ಮನೆ ಮೇಲೆ ಇಡಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿ ನಾಗೇಂದ್ರ ಅವರ ಫ್ಲ್ಯಾಟ್ ಇದ್ದು, ಇಲ್ಲೂ ದಾಳಿ ನಡೆಸಲಾಗಿದೆ.