ವಾಲ್ಮೀಕಿ ನಿಗಮ ಹಗರಣ: ಡಿಸಿ ಕಚೇರಿ ಮುಂಭಾಗ ರಾತ್ರಿಯಿಡೀ ಮಲಗಿದ ಬಿ ಶ್ರೀರಾಮುಲು

Krishnaveni K

ಶನಿವಾರ, 29 ಜೂನ್ 2024 (10:28 IST)
ಬಳ್ಳಾರಿ: ವಾಲ್ಮೀಕಿ ನಿಗಮ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ಪ್ರತಿಭಟನೆ ಮುಂದುವರಿಸಿದೆ. ಇದೀಗ ಮಾಜಿ ಸಚಿವ ಬಿ ಶ್ರೀರಾಮುಲು ಡಿಸಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ವರ್ಗಾವಣೆಯಾದ ಹಣದ ಪೈಕಿ ವಿವಿಧ ಖಾತೆಗಳಿಗೆ ವರ್ಗಾವಣೆಯಾದ 10 ಕೋಟಿ ರೂ.ಗಳನ್ನು ತನಿಖಾ ತಂಡ ವಶಪಡಿಸಿಕೊಂಡಿಸಿದೆ. ವಿವಿಧ ಬಾರ್, ಚಿನ್ನದ ಅಂಗಡಿಗಳ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ವಾಲ್ಮೀಕಿ ಹಗರಣ ಈಗ ವಿಪಕ್ಷ ಬಿಜೆಪಿಗೆ ದೊಡ್ಡ ಅಸ್ತ್ರವಾಗಿದೆ. ನಿನ್ನೆಯೂ ರಾಜ್ಯ ಬಿಜೆಪಿ ಘಟಕ ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ ನಡೆಸಿತು. ಇದೇ ವಿಚಾರವಾಗಿ ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ಪ್ರತಿಭಟನೆ ನಡೆಸುತ್ತಿದ್ದಾರೆ. ಡಿಸಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಬಿ ಶ್ರೀರಾಮುಲು ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕ. ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿ ಸೋತಿದ್ದರು. ಇದೀಗ ತಮ್ಮ ಸಮುದಾಯದ ನಿಗಮದ ಹಗರಣ ವಿಚಾರವನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ