ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದ ಪ್ರಮುಖ ಆರೋಪಿ ಮಾಜಿ ಸಚಿವ ನಾಗೇಂದ್ರರನ್ನು ಇಂದು ಬೆಳಿಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಹಗರಣದಲ್ಲಿ ನಾಗೇಂದ್ರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಈ ಪ್ರಕರಣದ ಬಗ್ಗೆ ಎಸ್ ಐಟಿ ಈಗಾಗಲೇ ತನಿಖೆ ನಡೆಸುತ್ತಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣವಾಗಿರುವುದರಿಂದ ಇಡಿ ಕೂಡಾ ರಂಗಕ್ಕಿಳಿದಿತ್ತು.
ಬುಧವಾರ ನಾಗೇಂದ್ರ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದ ಇಡಿ ದಾಖಲೆಗಳ ಪರಿಶೀಲನೆ ನಡೆಸಿತ್ತು. ಈ ವೇಳೆ ಅವ್ಯವಹಾರ ನಡೆದಿರುವುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿತ್ತು. ತಮ್ಮ ಆಪ್ತರ ಮೂಲಕ ಮಾಜಿ ಸಚಿವರು ಹಣ ವರ್ಗಾವಣೆ ಮಾಡಿಕೊಂಡಿದ್ದರು ಎಂಬುದು ಸ್ಪಷ್ಟವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಡಾಲರ್ಸ್ ಕಾಲೊನಿಯಲ್ಲಿರುವ ನಾಗೇಂದ್ರ ನಿವಾಸಕ್ಕೆ ಬಂದ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಗೇಂದ್ರ ಪರವಾಗಿ ಅವರ ಆಪ್ತ ಹವಾಲ ಹಣ, ಚಿನ್ನದ ಬಿಸ್ಕತ್ ರೂಪದಲ್ಲಿ 50 ರಿಂದ 60 ಕೋಟಿ ರೂ. ಪಡೆದಿದ್ದಾರೆ ಎಂಬ ಆರೋಪಗಳಿವೆ. ಅಕ್ರಮ ಹೊರಬರುತ್ತಿದ್ದಂತೇ ವಿಪಕ್ಷಗಳು ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿದ್ದವು. ಅದರಂತೆ ನಾಗೇಂದ್ರ ರಾಜಕೀಯ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದರು. ಇದೀಗ ಎಸ್ಐಟಿ, ಇಡಿ ಅಧಿಕಾರಿಗಳು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.