ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅಧಿಕಾರ ಸ್ವೀಕಾರ

ಮಂಗಳವಾರ, 31 ಮೇ 2022 (15:08 IST)
ಬೆಂಗಳೂರು : ಭಾರತೀಯ ಆಡಳಿತ ಸೇವೆಯ ಹಿರಿಯ ಅಧಿಕಾರಿ ವಂದಿತಾ ಶರ್ಮಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು.
 
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಪಿ ರವಿಕುಮಾರ್ ಅವರ ವಯೋ ನಿವೃತ್ತಿಯಿಂದ ತೆರವಾದ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986 ನೇ ಸಾಲಿನ ತಂಡದ ವಂದಿತಾ ಶರ್ಮಾ ಉತ್ತರಾಧಿಕಾರಿಯಾಗಿದ್ದಾರೆ.

ವಂದಿತಾ ಶರ್ಮಾ ಅವರು ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುತ್ತಿರುವ 4ನೇ ಮಹಿಳೆಯಾಗಿದ್ದು, ರಾಜ್ಯ ಸರ್ಕಾರದ 39 ನೇ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. 

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಈ ಹಿಂದೆ 2000 ನೇ ಇಸವಿಯಲ್ಲಿ ತೆರೇಸಾ ಭಟ್ಟಾಚಾರ್ಯ, 2006 ನೇ ಇಸವಿಯಲ್ಲಿ ಮಾಲತಿ ದಾಸ್ ಹಾಗೂ 2017 ನೇ ಇಸವಿಯಲ್ಲಿ ಕೆ ರತ್ನ ಪ್ರಭ ಅಲಂಕರಿಸಿದ್ದರು.

ಕೆ ರತ್ನ ಪ್ರಭ ಅವರ ಅಧಿಕಾರಾವಧಿಯಲ್ಲಿ ರಾಜ್ಯ ಪೋಲಿಸ್ ಮಹಾನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಹುದ್ದೆಯನ್ನು ನೀಲಮಣಿ ಎನ್ ರಾಜು ಅಲಂಕರಿಸಿದಾಗ ಎರಡು ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇದ್ದರು ಎಂಬುದು ಗಮನಾರ್ಹ ಅಂಶವಾಗಿತ್ತು.

ಇದೀಗ ವಂದಿತಾ ಶರ್ಮಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಇರುವ 3 ಪ್ರಮುಖ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದಂತಾಗುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ