ಹಿರಿಯ ನಟ ಸತ್ಯಜೀತ್ ಅಂತಿಮ ದರ್ಶನ: ಅಪಾರ ಅಭಿಮಾನಿಗಳಲ್ಲಿ ಮಡುಗಟ್ಟಿದ ಶೋಕ

ಭಾನುವಾರ, 10 ಅಕ್ಟೋಬರ್ 2021 (17:33 IST)
ಬೆಂಗಳೂರು : ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ನಟ ಸತ್ಯಜಿತ್ ನಿಧನರಾಗಿದ್ದು. 72 ವರ್ಷದ ಸತ್ಯಜಿತ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ವಾರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ,ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಹೆಗಡೆ ನಗರದ ಶಬರಿ ನಗರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 3 ಗಂಟೆ ನಂತರ  ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
 
ಇದೀಗ ನಗರದ ಹೆಗೆಡೆ ನಗರದ ನಿವಾಸಕ್ಕೆ ಮೃತದೇಹ ಶಿಫ್ಟ್ ಆಗಿದ್ದು, ಆಸ್ಪತ್ರೆಯಿಂದ ಮೃತದೇಹ ನಿವಾಸಕ್ಕೆ ತಲುಪಿ ಸಿದ್ಧತೆ ಪೂರ್ಣಗೊಂಡ ಬಳಿಕ ಸಾರ್ವಜನಿಕರ ದರ್ಶನಕ್ಕೆ ಕುಟುಂಬಸ್ಥರು ಅವಕಾಶ ನೀಡಿದ್ದಾರೆ. ಸಾರ್ವಜನಿಕರ ದರ್ಶನದ ನಂತರ ಮಧ್ಯಾಹ್ನ 3 ಘಂಟೆಗೆ ಹೆಗೆಡೆ ನಗರದ ಖಬರ್ ಸ್ಥಾನ್  ದಲ್ಲಿ ಅಂತ್ಯ ಸಂಸ್ಕಾರ ನೆಡೆಯಲಿದೆ. ಬೌರಿಂಗ್ ಆಸ್ಪತ್ರೆಯಲ್ಲಿಯೇ ಪುತ್ರ ಆಕಾಶ್ ಹಾಗೂ ಸ್ನೇಹಿತರು ಇದ್ದು ಬಿಲ್ ಸೆಟ್ಟಲ್ಮೆಂಟ್ ಮತ್ತು ಆಸ್ಪತ್ರೆಗೆ ಸಂಭಂದಿಸಿದ ಕಾಗದ ಪತ್ರಗಳನ್ನು ಸಹಿ ಮಾಡಿ ನೀಡುವುದರಲ್ಲಿ ನಿರತರಾಗಿದ್ದಾರೆ.
 
600ಕ್ಕೂ ಹೆಚ್ಚು ಸಿನೆಮಾ: 
 
 
ಸೈಯ್ಯದ್ ನಿಜಾಮುದ್ದೀನ್ ಚಿತ್ರರಂಗದಲ್ಲಿ ಸತ್ಯಜಿತ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. 1986ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ  ಅಭಿನಯಿಸಿದ್ದರು. ಅಪ್ಪು, ಅರಸು, ಅ ಆಪ್ತಮಿತ್ರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.
 
2018 ರ ಸೆಕೆಂಡ್ ಹಾಫ್ ಕೊನೆಯ ಚಿತ್ರ: 
 
 
ಸತ್ಯಜಿತ್ ರಿಗೆ ಗ್ಯಾಂಗ್ರಿನ್ ಕಾಣಿಸಿಕೊಂಡ ಬಳಿಕ ಬೇಡಿಕೆ ಕಡಿಮೆಯಾಗಿತ್ತು. 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ನಟನೆ ಸೆಕೆಂಡ್ ಹಾಫ್ ಚಿತ್ರದಲ್ಲಿ ವೀಲ್‌ಚೇರ್‌ನಲ್ಲಿ ಕುಳಿತುಕೊಂಡೇ ನಟಿಸಿದ್ದರು. ಆ ಬಳಿಕ ಬೇರೆ ಯಾವುದೇ ಸಿನಿಮಾದಲ್ಲಿ ಸತ್ಯಜಿತ್ ಕಾಣಿಸಿಕೊಂಡಿರಲಿಲ್ಲ. ನಟ ಸತ್ಯಜಿತ್, ವಿಲನ್, ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು. ಸತ್ಯಜಿತ್ ನಿಧನದಿಂದ ಕನ್ನಡ ಚಿತ್ರರಂಗ ಆಘಾತಕ್ಕೊಳಗಾಗಿದ್ದು, ಅಪಾರ ಅಭಿಮಾನಿಗಳು ಶೋಕ ವ್ಯಕ್ತಪಡಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ