ಕ್ಷಮೆಯಾಚಿಸಿದ ವಿಶ್ವೇಶ್ವರ ಭಟ್

ಶುಕ್ರವಾರ, 4 ನವೆಂಬರ್ 2022 (17:49 IST)
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಅವಹೇಳನಕಾರಿಯಾಗಿ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ದಿನಪತ್ರಿಕೆ ‘ವಿಶ್ವವಾಣಿ’ಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಎದುರು ಹಾಜರಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ‘ವಿಶ್ವೇಶ್ವರ ಭಟ್ ಆಯೋಗದ ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದಾರೆ. ಈ ಸಂಬಂಧ ಲಿಖಿತವಾಗಿಯೂ ಕ್ಷಮೆ ಕೇಳಿದ್ದಾರೆ’ ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ತಿಳಿಸಿದರು. ‘ಭಾರತದ ರಾಷ್ಟ್ರಪತಿ ಅವರನ್ನು ಅವಮಾನಿಸುವ ಯಾವುದೇ ದುರುದ್ದೇಶ ತನಗೆ ಇಲ್ಲ ಎಂಬುದಾಗಿ ವಿಶ್ವೇ ಶ್ವರ ಭಟ್ ಸ್ಪಷ್ಟಪಡಿಸಿದ್ದಾರೆ’ ಎಂದೂ ತಿಳಿಸಿದರು. ಆಯೋಗವು ಕ್ಷಮಾಪಣೆ ಪತ್ರದೊಂದಿಗೆ ಪ್ರಕರಣದ ವಿವರಗಳನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದೆ ಎಂದೂ ಅವರು ಮಾಹಿತಿ ನೀಡಿದರು. ರಾಷ್ಟ್ರಪತಿ ವಿರುದ್ಧ ಅವಹೇಳನಕಾರಿಯಾಗಿ ಬರೆದುದರ ಬಗ್ಗೆ ಮಾಡಲಾಗಿದ್ದ ಪೋಸ್ಟ್ ಅನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು, ಖುದ್ದಾಗಿ ಹಾಜರಾಗುವಂತೆ ನೋಟಿಸ್ ನೀಡಿತ್ತು. ಮೊಹಮ್ಮದ್ ಮಫಾಜ್ ಎಂಬುವವರು ಈ ಬಗ್ಗೆ ಅಕ್ಟೋ ಬರ್ 9ರಂದು ಟ್ವೀಟ್ ಮಾಡಿದ್ದರು. ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಪ್ರಕಟವಾಗಿದ್ದ ಲೇಖನದ ಎರಡು ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದರು. ಜತೆಗೆ ಟ್ವೀಟ್ ಅನ್ನು ರಾಷ್ಟ್ರಪತಿ ಭವನದ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ