ಪಿ.ಇ.ಎಸ್ ವಿಶ್ವವಿದ್ಯಾಲಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
ಶನಿವಾರ, 29 ಏಪ್ರಿಲ್ 2023 (17:20 IST)
ನಗರದಲ್ಲಿ ವಿದ್ಯಾರ್ಥಿಗಳೆಲ್ಲರೂ ಚುನಾವಣಾ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಿ, ತಮ್ಮ ಪೋಷಕರು, ಸ್ನೇಹಿತರು ಮತ್ತು ನೆರೆಹೊರೆಯಿಂದ ತಪ್ಪದೆ ಮತದಾನ ಮಾಡುವಂತೆ ನೋಡಿಕೊಳ್ಳುವುದರ ಜೊತೆಗೆ ಸ್ವತಃ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಮಾನ್ಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ವಿದ್ಯಾರ್ಥಿಗಳಲ್ಲಿ ಕೋರಿದರು.
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆರ್.ಆರ್.ನಗರ ವಲಯ ವ್ಯಾಪ್ತಿಗೆ ಬರುವ ಆರ್.ವಿ ಇಂಜಿನಿಯರಿಂಗ್ ಕಾಲೇಜು ಹಾಗೂ ಪಿ.ಇ.ಎಸ್ ವಿಶ್ವವಿದ್ಯಾಲಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮತದಾನ ಮಾಡುತ್ತಿರುವ ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ನಗರದಲ್ಲಿ ಒಟ್ಟಾರೆ 97.15 ಲಕ್ಷ ಮಂದಿ ಮತದಾರಲ್ಲಿ, ಅದರಲ್ಲಿ 1.43 ಲಕ್ಷ ಯುವ ಮತದಾರರಿದ್ದಾರೆ. ಕಳೆದ ಬಾರಿಗಿಂತ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಯುವ ಮತದಾರರಿದ್ದು, ಎಲ್ಲರೂ ಮತ ಚಲಾಯಿಸಿ ಬೇರೆಯವರು ಮತದಾನ ಮಾಡುವಂತೆ ಪ್ರೇರೇಪಿಸಬೇಕೆಂದು ತಿಳಿಸಿದರು.
ಮತದಾನದ ದಿನವಾದ ಮೇ. 10 ರಂದು ಮತಗಟ್ಟೆಗಳ ಬಳಿ ಕಾಯಬಾರದೆಂಬ ಉದ್ದೇಶದಿಂದ ಈ ಬಾರಿ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸೇರಿ ಮತಗಟ್ಟೆಗಳ ಸಂಖ್ಯೆಯನ್ನು 8082ಕ್ಕೆ ಹೆಚ್ಚಿಸಲಾಗಿದೆ. ಎಲ್ಲಾ ಮತಗಟ್ಟೆಗಳ ಬಳಿಯೂ ಕನಿಷ್ಠ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಚುನಾವಣಾ ಸಂಬಂಧಿತ ಪ್ರಶ್ನೆ ಅಥವಾ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1950ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಮತದಾನದ ದಿನವನ್ನು ಸಾರ್ವತ್ರಿಕಾ ರಜಾದಿನವನ್ನಾಗಿ ಘೋಷಿಸಲಾಗುತ್ತದೆ. ನೀವು ಮತ ಚಲಾಯಿಸುವ ಮತಗಟ್ಟೆಯ ಬಗ್ಗೆ ಮಾಹಿತಿಗಾಗಿ voterportal.eci.gov.in ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಹೇಳಿದರು.
ಮತದಾನ ಮಾಡುವ ದಿನ ಶೇಖಡಾವಾರು ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದೇ ಭಾನುವಾರ(ಏ. 30) ನಗರದಾದ್ಯಂತ ಅಧಿಕಾರಿ/ಸಿಬ್ಬಂದಿಗಳೊಡನೆ ಏಕಕಾಲದಲ್ಲಿ “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಎಲ್ಲಾ ಯುವ ಮತದಾರರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಪ್ರಸ್ತುತ ಚುನಾವಣೆಯ ಮತದಾನದ ದಿನಾಂಕ ಮತ್ತು ಸಮಯ, ಬಿಎಲ್‌ಒ ಅಧಿಕಾರಿಗಳ ಸಂಪರ್ಕ ಪ್ರಮುಖ ವೆಬ್‌ಸೈಟ್, ಸಹಾಯವಾಣಿ ಸಂಖ್ಯೆಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಮತದಾರರ ಮಾರ್ಗದರ್ಶಿಯನ್ನು ಕನ್ನಡ/ಇಂಗ್ಲೀಷ್ ಕರಪತ್ರವನ್ನು ಮತದಾನದ ಮುಂಚಿತವಾಗಿ ಪ್ರತಿ ಮನೆಗೆ ವಿತರಿಸಲಾಗುತ್ತದೆ. ಮತಗಟ್ಟೆಯಲ್ಲಿ ಮತದಾರರು ಮಾಡಬೇಕಾದ ಮತ್ತು ಮಾಡಬಾರದಂತಹ ಇತರೆ ಪ್ರಮುಖ ಮಾಹಿತಿಯನ್ನು ಅಗತ್ಯವಿರುವ ದಾಖಲೆಗಳನ್ನು ಒಳಗೊಂಡಿರುವ ಮತದಾರರ ಮಾರ್ಗದರ್ಶಿ ಕರಪತ್ರವನ್ನು ಬಿಎಲ್‌ಒಗಳ ಮೂಲಕ ಮತದಾರರ ಚೀಟಿ ಜತೆಗೆ ವಿತರಿಸಲಾಗುತ್ತದೆ ಎಂದು ಹೇಳಿದರು.