ಬೆಂಗಳೂರು: ಮಹಿಳೆಯರ ದೌರ್ಜನ್ಯ ಪ್ರಕರಣದಲ್ಲಿ ತನಿಖೆಗೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣರನ್ನು ಬಂಧಿಸಲು ಈಗ ಎಸ್ಐಟಿ ಮುಂದಿರುವ ಆಯ್ಕೆಗಳೇನು ಎಂದು ನೋಡೋಣ.
ಸತತ ಮೂರನೇ ಬಾರಿ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡ ಪ್ರಜ್ವಲ್ ರೇವಣ್ಣ ವಿದೇಶದಿಂದ ಭಾರತಕ್ಕೆ ಬರದೇ ಎಸ್ಐಟಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ಕಳೆದ 15 ದಿನಗಳಿಂದ ವಿದೇಶದಲ್ಲಿಯೇ ಇದ್ದಾರೆ.
ಅವರು ಎಲ್ಲಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ಸ್ವತಃ ಎಚ್ ಡಿ ರೇವಣ್ಣ ಹೇಳುತ್ತಿದ್ದಾರೆ. ಇದರ ನಡುವೆ ಮೂರು ಬಾರಿ ಭಾರತಕ್ಕೆ ಬರಲು ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಇದೀಗ ಅವರನ್ನು ಬಂಧಿಸುವುದೇ ಎಸ್ಐಟಿಗೆ ತಲೆನೋವಾಗಿದೆ.
ಪ್ರಜ್ವಲ್ ಭಾರತಕ್ಕೆ ಬರದೇ ಇದ್ದರೆ ಎಸ್ಐಟಿ ಮುಂದೆ ರೆಡ್ ಕಾರ್ನರ್ ನೋಟಿಸ್ ಒಂದೇ ಕೊನೆಯ ಅವಕಾಶ. ಇದಕ್ಕೆ ಮೊದಲು ಎಸ್ಐಟಿ ತಲೆಮರೆಸಿಕೊಂಡ ಆರೋಪಿ ಎಂದು ನ್ಯಾಯಾಲಯಕ್ಕೆ ವರದಿ ಕೊಡಬೇಕು. ಆಗ ನ್ಯಾಯಾಲಯ ಕೋರ್ಟ್ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗುತ್ತದೆ. ಸಮನ್ಸ್ ಗೆ ಗೈರಾದರೆ ಕೋರ್ಟ್ ಅನುಮತಿ ಪಡೆದು ಸಿಬಿಐಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಎಸ್ಐಟಿ ಮನವಿ ಮಾಡಲಿದೆ. ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ ಪ್ರಜ್ವಲ್ ಯಾವ ದೇಶದಲ್ಲಿದ್ದಾರೋ ಆ ದೇಶದ ಪೊಲೀಸರು ಅವರನ್ನು ಬಂದಿಸಬಹುದಾಗಿದೆ. ಆದರೆ ಈ ಎಲ್ಲಾ ಪ್ರಕ್ರಿಯೆ ನಡೆಸಲು ಒಂದು ತಿಂಗಳಿಗೂ ಅಧಿಕ ಸಮಯ ಬೇಕಾಗುತ್ತದೆ.