ರಂಗಾಂತರಾಳದಲ್ಲಿ ಹಿರಿಯ ರಂಗಕರ್ಮಿಗಳು ತಮ್ಮ ಜೀವನವನ್ನು ಬಿಚ್ಚಿಟ್ಟಿದ್ದಾರೆ.
ಹಿರಿಯ ರಂಗಕರ್ಮಿಗಳ ಅನುಭವಗಳನ್ನು ಇಂದಿನ ಯುವ ರಂಗಕರ್ಮಿಗಳಿಗೆ ತಲುಪಿಸಲು ರಂಗಾಂತರಾಳ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಬೆಂಗಳೂರಿನ ರಂಗ ಸಮಾಜದ ಸದಸ್ಯರಾದ ಶ್ರೀಧರ್ ಹೆಗಡೆ ಅವರು ಹೇಳಿದರು.
ಕಲಬುರಗಿ ನಗರದ ರಂಗಾಯಣದಲ್ಲಿ ಏರ್ಪಡಿಸಲಾಗಿದ್ದ ರಂಗಾಂತರಾಳ-1 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಈ ತಿಂಗಳ ಅತಿಥಿಯಾಗಿ ತಮ್ಮ ರಂಗಾನುಭವಗಳನ್ನು ಹಂಚಿಕೊಂಡ ಹಿರಿಯ ರಂಗಕರ್ಮಿ ಎಚ್.ಎಸ್. ಬಸವಪ್ರಭು ಅವರು, ಪರಿಶ್ರಮದಿಂದ ಕೂಡಿದ ರಂಗಾಸಕ್ತಿ ಅಗತ್ಯವಾಗಿದೆ. ಚಿಕ್ಕಂದಿನಲ್ಲಿ ಬೀದಿ ಬದಿಯಲ್ಲಿ ಆಡಿ ಬೆಳೆದ ನನಗೆ ಕಾಲೇಜು ರಂಗಭೂಮಿಯು ಈ ಕ್ಷೇತ್ರದಲ್ಲಿ ಆಸಕ್ತಿ ವಹಿಸುವಂತೆ ಮಾಡಿತು. ಕ್ರಮೇಣ ಸಮುದಾಯದ ಸಾಂಸ್ಕೃತಿಕ ಜಾಥಾಗಳಲ್ಲಿ ಭಾಗವಹಿಸುವ ಮೂಲಕ ರಂಗದಲ್ಲಿ ಪರಿಶ್ರಮ ಪಡಲು ಸಾಧ್ಯವಾಯಿತು ಎಂದರು.
ರಂಗಭೂಮಿಯಲ್ಲಿ ನಾನು ಕಾರ್ಯನಿರ್ವಹಿಸಿದ್ದು, ಕೇವಲ ಮನರಂಜನೆ ನೀಡುವುದಕ್ಕೆ ಅಲ್ಲ. ಜನಸಾಮಾನ್ಯರ ತಿಳುವಳಿಕೆಯ ವಿಸ್ತಾರ ಹೆಚ್ಚಿಸಲು, ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆ ಅರ್ಥ ಮಾಡಿಕೊಳ್ಳಲು ರಂಗಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ ಎಂದರು.