ರೈತರ ಸಾಲವನ್ನು 24 ಗಂಟೆಗಳಲ್ಲೇ ಮನ್ನಾ ಮಾಡಲಾಗುತ್ತದೆ. ಹೀಗಂತ ಮುಖ್ಯಮಂತ್ರಿ ಹೇಳಿದ್ದಾರೆ.
ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಅರ್ಹತಾ ಪತ್ರಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಅರ್ಹ ರೈತರು ಸರಿಯಾದ ದಾಖಲೆಯನ್ನು ನೀಡಿದರೆ, ದಾಖಲೆ ನೀಡಿದ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡಲಾಗುವುದು. ಈ ಬಗ್ಗೆ ಅನುಮಾನ ಬೇಡ.
ರಾಜ್ಯ ಬಜೆಟ್ ನಲ್ಲಿ ರೈತರ ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 5 ಸಾವಿರ ಕೋಟಿ ರೂಪಾಯಿಗಳನ್ನು ನದಿ ನೀರನ್ನು ಎತ್ತಿ ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗೆ ತೆಗೆದಿರಿಸುವ ಮೂಲಕ ಬಾಕಿ ಉಳಿದಿರುವ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ. ಹೀಗಂತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಹಾವೇರಿಯ ಹಿರೇಕೆರೂರ ಮತ್ತು ರಟ್ಟಿಹಳ್ಳಿ ತಾಲೂಕಿನ 88 ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಸರ್ವಜ್ಞ ಕೆರೆ ತುಂಬಿಸುವ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ರೈತರು ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡುವುದು ನಮ್ಮ ಸರಕಾರದ ಪ್ರಮುಖ ಉದ್ದೇಶವಾಗಿದೆ ಎಂದಿದ್ದಾರೆ.