ಬಿದ್ದು ಹೋಗುವ ಕಾಂಗ್ರೆಸ್ಸಿಗೆ ಮತ ಕೊಟ್ಟರೆ ಏನು ಉಪಯೋಗ: ಆರ್.ಅಶೋಕ್

sampriya

ಬುಧವಾರ, 30 ಅಕ್ಟೋಬರ್ 2024 (18:45 IST)
ಬೆಂಗಳೂರು: ಅಧಿಕಾರಕ್ಕೆ ಬಂದು 500 ದಿನವಾದರೂ ಚನ್ನಪಟ್ಟಣ, ರಾಮನಗರಕ್ಕೆ ಬಾರದ ಮುಖ್ಯಮಂತ್ರಿಗಳು ನಾನು ಚನ್ನಪಟ್ಟಣವನ್ನು ಉದ್ಧಾರ ಮಾಡುತ್ತೇನೆ ಎಂದು ಹೇಳಿದರೆ ನಂಬಲು ಸಾಧ್ಯವೇ? ಸಾಧ್ಯವೇ ಇಲ್ಲ ಅಲ್ಲವೇ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನಿಸಿದರು.

ಚನ್ನಪಟ್ಟಣದ ‘ಶಿಶಿರ ರೆಸಾರ್ಟ್' ನಲ್ಲಿ ಇಂದು ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಡಿ.ಕೆ.ಶಿವಕುಮಾರ್ ಇಲ್ಲಿ ಚುನಾವಣೆಗೆ ನಿಲ್ಲುವುದಾಗಿ ಹೇಳಿದ್ದರು. ಜನರೂ ಅದೇರೀತಿ ಭಾವಿಸಿದ್ದರು. ಈಗ ಕೈಕೊಟ್ಟ ಅನ್ನಬೇಕಲ್ಲವೇ? ಕೈಕೊಟ್ಟು ಹೋದವರಿಗೆ ಮತ ಕೊಡಬೇಕೇ ಎಂದು ಯೋಚಿಸಿ ಎಂದು ತಿಳಿಸಿದರು.

ಸರಕಾರದ ಅವಧಿ ಈಗಾಗಲೇ ಸುಮಾರು 2 ವರ್ಷ ಮುಗಿದಿದೆ. ಸರಕಾರ ಇದ್ದರೆ 3 ವರ್ಷ ಆಯುಸ್ಸಿದೆ. ಮುಡಾ ಮತ್ತಿತರ ಹಗರಣದಿಂದ ಹೆಚ್ಚು ಕಮ್ಮಿ ಆದರೆ ಇನ್ನೊಂದು ವರ್ಷಕ್ಕೆ ಚುನಾವಣೆ ಬರಬಹುದು; ಮುಳುಗಿ ಹೋಗುವ, ಬಿದ್ದು ಹೋಗುವ ಕಾಂಗ್ರೆಸ್ಸಿಗೆ ಮತ ಕೊಟ್ಟರೆ ಏನು ಉಪಯೋಗವಿದೆ? ಕಾರ್ಯಕರ್ತರೆಲ್ಲರೂ ಇದನ್ನು ಜನಕ್ಕೆ ತಿಳಿಸಿ ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

 ಮುಖ್ಯಮಂತ್ರಿ ಬಡವರಿಗೆ ನಿವೇಶನ ಕೊಡುವ ಬದಲು ಕುಟುಂಬಕ್ಕೆ ಸೈಟ್ ಕೊಡಿಸಿ ಸಿಕ್ಕಿ ಹಾಕಿಕೊಂಡಿದ್ದಾರೆ. ಮುಡಾದಲ್ಲೂ ಲೂಟಿ, ವಾಲ್ಮೀಕಿ ನಿಗಮದಲ್ಲೂ ಲೂಟಿ ಮಾಡಿದ ಲೂಟಿಕೋರ ಸರಕಾರವನ್ನು ಬೆಂಬಲಿಸಬೇಡಿ. ಅದರಿಂದ ಲೂಟಿಕೋರರಿಗೆ ಸರ್ಟಿಫಿಕೇಟ್ ಕೊಟ್ಟಂತಾಗಲಿದೆ ಎಂದು ಎಚ್ಚರಿಸಿದರು. ಬಿಜೆಪಿ ಅವಧಿಯ ಸರಕಾರದಲ್ಲಿ ಆದ ಅಭಿವೃದ್ಧಿ ಮತ್ತು ಕಾಂಗ್ರೆಸ್ಸಿನ ಅಭಿವೃದ್ಧಿ ಶೂನ್ಯತೆ ಬಗ್ಗೆ ಚರ್ಚೆಗೆ ನಾವು ಸಿದ್ಧ ಎಂದು ಅವರು ಸವಾಲೆಸೆದರು.

ಸಿಎಂ- ಸಚಿವರಿಗೆ ಸೀಟು ಹೋಗುವ ಭಯ: ಡಾ.ಸಿ.ಎನ್.ಅಶ್ವತ್ಥನಾರಾಯಣ
 ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ, ಕಾಂಗ್ರೆಸ್ ಸರಕಾರದ ಹೆಚ್ಚಿನ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಇವತ್ತು ಆತಂಕವಿದೆ. ಯಾವಾಗ ನನ್ನ ಸೀಟು ಹೋಗುತ್ತೋ, ಏನಾಗುತ್ತೋ ಎಂಬ ಭಯಾತಂಕ ಮುಖ್ಯಮಂತ್ರಿಯಿಂದ ಹಿಡಿದು ಎಲ್ಲ ಸಚಿವರನ್ನು ಕಾಡುತ್ತಿದೆ. ಅವರು ಮಾಡಿದ ಕರ್ಮಕಾಂಡದಿಂದ ಕಾಂಗ್ರೆಸ್ಸಿಗರು ಅತಂತ್ರದಲ್ಲಿದ್ದು, ಯಾವ ಕ್ಷಣದಲ್ಲೂ ಏನು ಬೇಕಾದರೂ ಆಗಬಹುದು ಎಂದು ನುಡಿದರು. ನಮ್ಮ ಮೇಲೆ ಸಾಕ್ಷಿರಹಿತ ಸುಳ್ಳು ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಆಡಳಿತವೆಂಬ ಪದವೇ ಇಲ್ಲ; ಅಭಿವೃದ್ಧಿಯಂತೂ ಕಾಣುತ್ತಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರವು ಬೆಳೆಗಾರ ಮತ್ತು ಬಳಕೆದಾರರ ಮಧ್ಯದಲ್ಲಿ ದಲ್ಲಾಳಿಯನ್ನು ತಂದು ವ್ಯಾಪಾರಿಗೆ ಅನುಕೂಲ ಮಾಡುವಂಥ ಸರಕಾರ ಎಂದು ದೂರಿದರು.

ಲೋಕಸಭಾ ಚುನಾವಣೆ ವೇಳೆ ರಾಜ್ಯದ ಜನತೆ ಎನ್‍ಡಿಎಗೆ ಆಶೀರ್ವಾದ ಮಾಡಿದ್ದಾರೆ. ಈ ಬಾರಿ ಮತ್ತೆ ಎನ್‍ಡಿಎ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು. ಬಿಜೆಪಿ, ಕಾಂಗ್ರೆಸ್ಸಿಗರ ಭ್ರಷ್ಟಾಚಾರವನ್ನು ಬಯಲಿಗೆಳೆದು ಕಾನೂನಿನ ಚೌಕಟ್ಟಿನಲ್ಲಿ ನಿಲ್ಲಿಸಿ, ರಾಜೀನಾಮೆ ಕೊಡುವಂಥ ಪರಿಸ್ಥಿತಿಗೆ ತಂದಿದೆ ಎಂದು ವಿಶ್ಲೇಷಿಸಿದರು.

ಕÉೀಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸಂಸದ ಸಿ.ಎನ್. ಮಂಜುನಾಥ್, ಮಾಜಿ ಸಚಿವ ಕೆ. ಎನ್. ನಾರಾಯಣ ಗೌಡ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ರಾಮನಗರ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮುಂತಾದವರು ಇದ್ದರು. ಅಲ್ಲದೆ ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ಮನವಿ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ