ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಭಾರೀ ಸದ್ದು ಮಾಡುತ್ತಿರುವುದು ವಾಲ್ಮೀಕಿ ನಿಗಮ ಮಂಡಳಿ ಹಗರಣ ವಿಚಾರ. ಅಷ್ಟಕ್ಕೂ ವಾಲ್ಮೀಕಿ ನಿಗಮ ಮಂಡಳಿ ಎಂದರೇನು, ಇದು ಯಾವಾಗ ಸ್ಥಾಪನೆಯಾಯಿತು ಮತ್ತು ಅದರ ಉದ್ದೇಶವೇನು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ವಾಲ್ಮೀಕಿ ನಿಗಮ ಮಂಡಳಿ ಸ್ಥಾಪನೆಯಾಗಿದ್ದು 2006 ರಲ್ಲಿ. ಇದರ ಮುಖ್ಯ ಉದ್ದೇಶವೆಂದರೆ ವಾಲ್ಮೀಕಿ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆ. ಆರ್ಥಿಕವಾಗಿ ಹಿಂದುಳಿದ ವಾಲ್ಮೀಕಿ ಸಮುದಾಯದ ಜನರ ಅಭಿವೃದ್ಧಿಗಾಗಿ ಈ ನಿಗಮ ಮಂಡಳಿಯನ್ನು ಸ್ಥಾಪಿಸಲಾಗಿತ್ತು.
ಆದರೆ ಈಗ ಅದೇ ನಿಗಮ ಮಂಡಳಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಾಲ್ಮೀಕಿ ಸಮುದಾಯದವರ ಆರ್ಥಿಕ ಸಬಲೀಕರಣಕ್ಕೆ ಬಳಕೆಯಾಗಬೇಕಿದ್ದ ಹಣ ಭ್ರಷ್ಟರ ಹೊಟ್ಟೆ ತುಂಬಿದೆ. ವಾಲ್ಮೀಕಿ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯವಾಗಿದೆ. ವಾಲ್ಮೀಕಿ ಸಮುದಾಯದವರಿಗೆ ಉದ್ಯೋಗಾವಕಾಶ, ಸಾಮಾಜಿಕ ಭದ್ರತೆ, ಆರ್ಥಿಕ ಭದ್ರತೆ, ಸ್ವಯಂ ಉದ್ಯೋಗ ತರಬೇತಿ ಇತ್ಯಾದಿ ಅಭಿವೃದ್ಧಿ ಕಾರ್ಯಕ್ಕೆಂದು ಈ ನಿಗಮವನ್ನು ಸ್ಥಾಪಿಸಲಾಗಿದೆ. ಈ ಇಲಾಖೆ ಬುಡಕಟ್ಟು ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಬರುತ್ತದೆ. ಈ ಖಾತೆ ನಾಗೇಂದ್ರ ಬಳಿಯಿತ್ತು. ಆಗಲೇ ಅವರು ಅಕ್ರಮ ಮಾಡಿದ್ದರು ಎಂಬುದು ಆರೋಪವಾಗಿದೆ.
ವಾಲ್ಮೀಕಿ ಸಮುದಾಯಕ್ಕೆ ಎಂದು ನಿಗಮಕ್ಕೆ ಸರ್ಕಾರದಿಂದ ಮಂಜೂರಾಗಿದ್ದ ಹಣ ಈಗ ಭ್ರಷ್ಟರ ಪಾಲಾಗಿದೆ. ಇದೆಲ್ಲದಕ್ಕೂ ಸಚಿವರಾಗಿದ್ದ ನಾಗೇಂದ್ರ ಕುಮ್ಮಕ್ಕು ಇತ್ತು ಎಂದು ಆರೋಪಿಸಲಾಗಿದೆ. ಇದೀಗ ಇಡಿ ಮತ್ತು ಎಸ್ಐಟಿ ಎರಡೂ ರಂಗಕ್ಕಿಳಿದಿದ್ದು ಪ್ರಕರಣದ ಕೂಲಂಕುಷ ತನಿಖೆ ನಡೆಸುತ್ತಿದೆ.