ಬೆಂಗಳೂರು: ಬಿಜೆಪಿ ಹೈಕಮಾಂಡ್ ಈಗಾಗಲೇ ಕೆಲವು ರಾಜ್ಯಗಳಿಗೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಆದರೆ ಕರ್ನಾಟಕದ ರಾಜ್ಯಾಧ್ಯಕ್ಷ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಕರ್ನಾಟಕಕ್ಕೆ ಹೊಸ ರಾಜ್ಯಾಧ್ಯಕ್ಷರ ನೇಮಕ ಯಾವಾಗ ಎಂಬ ಪ್ರಶ್ನೆಗಳಿಗೆ ಬಿಜೆಪಿ ಹಾಲಿ ಅಧ್ಯಕ್ಷ ಬಿವೈ ವಿಜಯೇಂದ್ರ ಉತ್ತರಿಸಿದ್ದಾರೆ.
ರಾಜ್ಯದಲ್ಲೂ ಬಿಜೆಪಿ ಅಧ್ಯಕ್ಷರ ಬದಲಾವಣೆಯಾಗಲಿದೆ ಎಂಬ ಸುದ್ದಿಗಳಿತ್ತು. ಆದರೆ ಈ ನಡುವೆ ವಿಜಯೇಂದ್ರ ನಮ್ಮಲ್ಲಿ ಅಧ್ಯಕ್ಷರ ಕುರ್ಚಿ ಖಾಲಿಯಿಲ್ಲ ಎಂದು ತಮ್ಮ ವಿರೋಧಿ ಬಣಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದರು. ಹಾಗಿದ್ದರೂ ವಿಜಯೇಂದ್ರ ಅವಧಿ ಮುಕ್ತಾಯವಾಗಿದ್ದು ಹೈಕಮಾಂಡ್ ಮುಂದಿನ ತೀರ್ಮಾನದ ಬಗ್ಗೆ ಎಲ್ಲರ ದೃಷ್ಟಿಯಿದೆ.
ವಿಜಯೇಂದ್ರ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರಾ ಅಥವಾ ಹೊಸಬರನ್ನು ಆಯ್ಕೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ನಡುವೆ ಇದರ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, ಸದ್ಯಕ್ಕೆ ಮೋದಿ ವಿದೇಶ ಪ್ರವಾಸದಲ್ಲಿದ್ದಾರೆ. ಮೋದಿಯವರು ವಾಪಸ್ ಆದ ಬಳಿಕ ಫೈನಲ್ ಆಗಲಿದೆ ಎಂದಿದ್ದಾರೆ.
ಇನ್ನೂ ನಾಲ್ಕು ರಾಜ್ಯಗಳ ಅಧ್ಯಕ್ಷರ ನೇಮಕವಾಗಬೇಕಿದೆ. ಅದರಲ್ಲಿ ಕರ್ನಾಟಕವೂ ಸೇರಿದೆ. ಹೀಗಾಗಿ ಈ ರಾಜ್ಯಗಳ ಜೊತೆ ಕರ್ನಾಟಕದ ಅಧ್ಯಕ್ಷರ ಸ್ಥಾನವೂ ತೀರ್ಮಾನವಾಗಲಿದೆ ಎಂದು ಅವರು ಹೇಳಿದ್ದಾರೆ.