ಬೆಂಗಳೂರು : ಕಾಂಗ್ರೆಸ್ನಲ್ಲಿ ಸಿಎಂ ಆಯ್ಕೆ ಕಗ್ಗಂಟು ಮುಂದುವರಿದಿದ್ದು ಈಗ ಚೆಂಡು ಹೈಕಮಾಂಡ್ ಅಂಗಳಕ್ಕೆ ತಲುಪಿದೆ.
ರಾತ್ರಿ ನಗರದ ಖಾಸಗಿ ಹೋಟೆಲಿನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಯಿತು. ಸಭೆಯ ಬಳಿಕ ವೀಕ್ಷಕರು ಶಾಸಕರ ಬಳಿ ಅಭಿಪ್ರಾಯ ವ್ಯಕ್ತಪಡಿಸಿದರು. ತಡರಾತ್ರಿ ಸರಿಸುಮಾರು 1:30ರವರೆಗೂ ವೀಕ್ಷಕರಿಗೆ ಶಾಸಕರು ಅಭಿಪ್ರಾಯ ನೀಡಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ಕೂಡ ಒಪ್ಪುವಂತಹ ತೀರ್ಮಾನವನ್ನೇ ಹೈಕಮಾಂಡ್ ಅಂಗಳಕ್ಕೆ ಕಳುಹಿಸಿಕೊಡಲಾಗಿದೆ.
ಹೈಕಮಾಂಡ್ ಈಗ ಯಾವ ನಿರ್ಣಯ ಕೈಗೊಳ್ಳಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಎರಡು ರೀತಿಯಲ್ಲಿ ಎಐಸಿಸಿ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಒಂದು ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಬರೆದು ಬಾಕ್ಸ್ನಲ್ಲಿ ಹಾಕಬಹುದು. ಇಲ್ಲವೇ ನೇರವಾಗಿ ವೀಕ್ಷಕರ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಲಾಗಿತ್ತು.
ಸಿಎಂ ಆಯ್ಕೆ ಹಿನ್ನಲೆ ಇಂದು ದೆಹಲಿಯಲ್ಲಿ ಸರಣಿ ಸಭೆ ನಡೆಯಲಿದ್ದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೈವೋಲ್ಟೇಜ್ ಸಭೆ ನಡೆಯಲಿದೆ. ಸೋನಿಯಾ, ರಾಹುಲ್ ಜೊತೆಗಿನ ಮುನ್ನ ವೀಕ್ಷಕರ ಜೊತೆಗೆ ಖರ್ಗೆ ಸಭೆ ನಡೆಸಲಿದ್ದಾರೆ. ಚರ್ಚೆ ಬಳಿಕ ಅಂತಿಮ ತಿರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಬಹುತೇಕ ಇಂದು ಇಂದು ಇಡೀ ದಿನ ಸಿಎಂ ಆಯ್ಕೆ ಕಸರತ್ತು ನಡೆಯುವ ಸಾಧ್ಯತೆಯಿದೆ.