ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ದಕ್ಷಿಣ ಭಾಗಕ್ಕೆ ಹೆಚ್ಚಿನ ಆದ್ಯತೆ

ಶುಕ್ರವಾರ, 1 ಅಕ್ಟೋಬರ್ 2021 (21:13 IST)
ಆಲಮಟ್ಟಿ: ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ದಕ್ಷಿಣ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ, ರಾಜ್ಯ ಸಮಗ್ರವಾಗಿ ಅಭಿವೃದ್ಧಿಯಾಗಬೇಕಾದರೆ ಉತ್ತರಭಾಗಕ್ಕೂ ಆದ್ಯತೆ ನೀಡಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಭಗವತ್ಪಾದರು ಹೇಳಿದರು.
ಶುಕ್ರವಾರ ಸಮೀಪದ ಚಿಮ್ಮಲಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಸಕಾಲಕ್ಕೆ ಮುಗಿಸುವ ಉತ್ಸುಕತೆವಹಿಸದಿರುವದು ನೋವುಂಟು ಮಾಡಿದೆ. ಕೃ.ಮೇ.ಯೋಜನೆಯು ಸಕಾಲದಲ್ಲಿ ಮುಗಿದರೆ ನೀರಾವರಿ ಸಂಪನ್ಮೂಲ ಹೆಚ್ಚೆಚ್ಚು ಬೆಳೆದಂತೆ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಈ ಭಾಗದ ಅಭಿವೃದ್ಧಿಗೆ ಜಾತಿಭೇದ, ಪಕ್ಷಭೇದ ಮರೆತು ಎಲ್ಲರೂ ಕೂಡ ಹೋರಾಟ ಮಾಡಿದರೆ ಅಭಿವೃದ್ಧಿ ಸಾಧ್ಯ. ರೈತರು ಎಂಥ ಕಠಿಣ ಸ್ಥಿತಿಯಲ್ಲಿಯೂ ಕೂಡ ಆತ್ಮಸ್ಥೆöÊರ್ಯ ಕಳೆದುಕೊಂಡು ಛಲದಿಂದ ಕ್ರಿಯಾಶೀಲರಾಗಿ ಕಾರ್ಯೋನ್ಮುಖರಾಗಬೇಕು ಎಂದು ಕಿವಿ ಮಾತು ಹೇಳಿದರು.
ರಾಜಕಾರಣಿಗಳು ಜಾತಿ ಜಾತಿಗಳ ಮಧ್ಯೆ ಸಂಘರ್ಷವನ್ನು ಹುಟ್ಟುಹಾಕುವ ಬೆಳವಣಿಗೆ ಕೆಲ ಭಾಗಗಳಲ್ಲಿ ನಡೆಯುತ್ತಿದೆ, ಇದು ಸರಿಯಲ್ಲ, ಯಾವುದೇ ಜಾತಿ, ಧರ್ಮಗಳೇ ಇರಲಿ ಮೊದಲು ನಾವು ಭಾರತ ಮಾತೆಯ ಮಕ್ಕಳು ಎನ್ನುವ ಭಾವನೆಯಿರಬೇಕು. ಆರ್ಥಿಕವಾಗಿ ದುರ್ಬಲರು ಎಲ್ಲ ಜಾತಿ ಜನಾಂಗಗಳಲ್ಲಿದ್ದಾರೆ ಅವರನ್ನು ಮೇಲೆತ್ತುವಂತಹ ಕೆಲಸವಾಗಬೇಕೆ ಹೊರತು ಜಾತಿಗಳನ್ನಾಧರಿಸಿ ಮೀಸಲಾತಿಯನ್ನಾಗಲಿ, ಸೌಲಭ್ಯಗಳನ್ನಾಗಲಿ ಕೊಟ್ಟರೆ ಇನ್ನುಳಿದ ಜಾತಿ ಜನಾಂಗಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಅನ್ಯಾಯವಾದಂತಾಗುತ್ತದೆ. ರಾಜಕಾರಣಿಗಳು ತಾರತಮ್ಯವನ್ನು ಮಾಡದೇ ಎಲ್ಲರ ಹಿತವನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
*ಕಳೆದ ಚುನಾವಣೆ ಸಂದರ್ಭದಲ್ಲಿ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರು ಲಿಂಗಾಯತ ಧರ್ಮಗಳ ಬಗ್ಗೆ ಬೇರೆ ಬೇರೆಯಾಗಿ ಹೇಳಿದ್ದರು. ಈಗ ಸಂಪೂರ್ಣ ಬದಲಾವಣೆಯಾಗಿ ವೀರಶೈವ ಲಿಂಗಾಯತ ಬೇರೆ ಅಲ್ಲ ನಾವೆಲ್ಲರೂ ಒಗ್ಗಟ್ಟಾಗಿ ಈ ಸಮುದಾಯವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವ ವಿಚಾರಧಾರೆಯನ್ನು ಮುಕ್ತಮನಸ್ಸಿನಿಂದ ಸ್ವಾಗತ ಮಾಡುತ್ತೇವೆ ಎಂದು ನುಡಿದರು.
ಅವರ ಭಾವನೆಯಲ್ಲಿ ಬದಲಾವಣೆಯಾಗಿರುವದರಿಂದ ರಂಭಾಪುರೀ ಜಗದ್ಗುರುಗಳಿಗೆ ಒಬ್ಬರಿಗೇ ಅಲ್ಲ ಎಲ್ಲ ವೀರಶೈವಲಿಂಗಾಯತ ಸಮುದಾಯಕ್ಕೆ ಹಾಗೂ ಮಠಾಧೀಶರಿಗೆ ಸಮಾಧಾನ ತಂದಿದೆ. ಇದೇ ಉದ್ದೇಶವನ್ನು ಗಟ್ಟಿಯಾಗಿದ್ದುಕೊಂಡು ಸಮಾಜವನ್ನು ಧರ್ಮವನ್ನು ಕಟ್ಟಿ ಬೆಳೆಸುವ ಕೆಲಸ ಮಾಡಲಿ. ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ ಸಿಗಲಿ ಎಂದು ಹಾರೈಸಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ