ಬೆಂಗಳೂರು: ತಾನು ಕೂತಿರುವ ಕುರ್ಚಿಯ ನಾಲ್ಕು ಕಾಲುಗಳನ್ನು ಭದ್ರವಾಗಿ ಇಟ್ಟುಕೊಳ್ಳಲಾಗದ ಬಿಜೆಪಿ
ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ಸಲಹೆ ನೀಡುತ್ತಿರುವುದು ಅವರ ಅಜ್ಞಾನ ಮತ್ತು ಅತ್ಮವಂಚನೆಯನ್ನು ಮಾತ್ರವಲ್ಲ, ದುರಹಂಕಾರವನ್ನೂ ಸೂಚಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಪರಿಶಿಷ್ಟ ಜಾತಿಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಎಂದು ಘೋಷಿಸಲಿ ಎಂದು ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸವಾಲೆಸೆದಿದ್ದರು.
ಇದೀಗ ವಿಜಯೇಂದ್ರ ಹೇಳಿಕೆಗೆ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ತಾನು ಕೂತಿರುವ ಕುರ್ಚಿಯ ನಾಲ್ಕು ಕಾಲುಗಳನ್ನು ಭದ್ರವಾಗಿ ಇಟ್ಟುಕೊಳ್ಳಲಾಗದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ಸಲಹೆ ನೀಡುತ್ತಿರುವುದು ಅವರ ಅಜ್ಞಾನ ಮತ್ತು ಅತ್ಮವಂಚನೆಯನ್ನು ಮಾತ್ರವಲ್ಲ, ದುರಹಂಕಾರವನ್ನೂ ಸೂಚಿಸುತ್ತದೆ.
ವಿಜಯೇಂದ್ರ ಅವರಿಗೆ ಓದುವ ಅಭ್ಯಾಸ ಇದ್ದರೆ ಈ ದೇಶದ ಹಿಂದುಳಿದ ಜಾತಿಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಭಾರತೀಯ ಜನತಾ ಪಕ್ಷ ಯಾವ ಯಾವ ಕಾಲದಲ್ಲಿ ಹೇಗೆಲ್ಲಾ ನಡೆಸಿಕೊಂಡಿದೆ ಎಂಬ ಇತಿಹಾಸವನ್ನು ಓದಿ ತಿಳಿದುಕೊಳ್ಳಲಿ.
ಬಂಗಾರು ಲಕ್ಷ್ಮಣ್ ಎಂಬ ಅಮಾಯಕ ದಲಿತ ನಾಯಕನನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಜೈಲಿಗೆ ತಳ್ಳಿದ್ದು ಮಾತ್ರವಲ್ಲ, ಅದೇ ಕೊರಗಿನಲ್ಲಿ ಅವರು ಸಾಯುವಂತೆ ಮಾಡಿದವರು ಯಾರು?
ಮಾತೆತ್ತಿದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರನ್ನು ಮೆರೆಸುವ ಬಿಜೆಪಿ
ಅವರನ್ನೇ ಪ್ರಧಾನಮಂತ್ರಿ ಯಾಕೆ ಮಾಡಿಲ್ಲ?
ಎ.ಪಿ.ಜೆ ಅಬ್ದುಲ್ ಕಲಾಮ್ ಅವರನ್ನು ರಾಷ್ಟ್ರಪತಿ ಮಾಡಿದ್ದೇ ಸಾಧನೆ ಎಂದು ಹೇಳಿಕೊಳ್ಳುವವರು, ಪ್ರಸಕ್ತ ಲೋಕಸಭೆಯಲ್ಲಿ ಬಿಜೆಪಿಗೆ ಸೇರಿರುವ ಒಬ್ಬನೇ ಒಬ್ಬ ಮುಸ್ಲಿಂ ಸಂಸದ ಯಾಕೆ ಇಲ್ಲ?
ಕಳೆದ ಲೋಕಸಭಾ ಚುನಾವಣೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ನಾಯಕನಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.