ಕಲಬುರಗಿ: ನವಂಬರ್ 2 ರಂದು ಚಿತ್ತಾಪುರದಲ್ಲಿ ಆರ್ ಎಸ್ಎಸ್ ಗೆ ಮಾತ್ರ ಯಾಕೆ, ನಮಗೂ ಪೆರೇಡ್ ನಡೆಸಲು ಅವಕಾಶ ಕೊಡಿ ಎಂದು ಐದು ಸಂಘಟನೆಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಇಂದು ಇದರ ತೀರ್ಪು ಬರುವ ಸಾಧ್ಯತೆಯಿದೆ.
ರಾಜ್ಯ ಸರ್ಕಾರ ಆರ್ ಎಸ್ಎಸ್ ಚಟುವಟಿಕೆಗಳಿಗೆ ನಿಯಂತ್ರಣ ಹೇರಿದೆ. ಇದೀಗ ಶತಮಾನೋತ್ಸವ ಸಂದರ್ಭದಲ್ಲಿ ಪಥಸಂಚಲನ ಮಾಡಲು ಹೊರಟಿರುವ ಆರ್ ಎಸ್ಎಸ್ ಇದಕ್ಕೆ ಸರ್ಕಾರದ ಒಪ್ಪಿಗೆ ಪಡೆಯಬೇಕಿದೆ. ಆದರೆ ಸರ್ಕಾರ ಪಥಸಂಚಲನಕ್ಕೆ ಒಪ್ಪಿಲ್ಲ ಎಂದು ಆರ್ ಎಸ್ಎಸ್ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಕೋರ್ಟ್ ಪಥಸಂಚಲನದ ಬಗ್ಗೆ ತೀರ್ಪು ನೀಡಲಿದೆ.
ಇದರ ನಡುವೆ ನಮಗೂ ಅದೇ ದಿನ ಪಥಸಂಚಲನ ಮಾಡಲು ಅವಕಾಶ ಕೊಡಿ ಎಂದು ಭೀಮ್ ಆರ್ಮಿ, ರೈತ ಸಂಘಟನೆಗಳು ಸೇರಿದಂತೆ ಐದು ಸಂಘಟನೆಗಳು ಅರ್ಜಿ ಹಾಕಿವೆ. ಭೀಮ್ ಆರ್ಮಿ, ದಲಿತ್ ಪ್ಯಾಂಥರ್, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರಾಜ್ಯ ರೈತ ಸಂಘ, ಹಸಿರು ಸೇನೆ, ಇಂಡಿಯನ್ ಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಷನ್ ಕೂಡಾ ಮನವಿ ಮಾಡಿದೆ.
ಇದೀಗ ಯಾವುದೋ ಉದ್ದೇಶಕ್ಕೆಂದು ಅಂತಲ್ಲ, ಆರ್ ಎಸ್ಎಸ್ ಜೊತೆ ಪೈಪೋಟಿಗೆಂದೇ ಇತರೆ ಸಂಘಟನೆಗಳು ಪಥಸಂಚಲನ ಮಾಡಲು ಹೊರಟಂತಿದೆ. ರೈತ ಸಂಘ ಕೇಂದ್ರದ ಅನ್ಯಾಯದ ವಿರುದ್ಧ ಎಂದರೆ ಭೀಮ್ ಆರ್ಮಿ ಹಿಂದುಳಿದ ವರ್ಗದವರಿಗಾಗಿ ಎನ್ನುತ್ತಿದೆ. ಒಟ್ಟಿನಲ್ಲಿ ಈಗ ಪಥಸಂಚಲನ ಜಾತ್ರೆಯಾಗುತ್ತಿದೆ. ಇದರ ಬಗ್ಗೆ ಇಂದು ಕೋರ್ಟ್ ಏನು ತೀರ್ಪು ನೀಡಲಿದೆ ಎಂಬುದೇ ಎಲ್ಲರ ಕುತೂಹಲ.