ಮೈತ್ರಿ ಸರಕಾರ ಆಪರೇಷನ್ ಕಮಲದ ಭೀತಿಯಲ್ಲಿದ್ದರೆ, ಇತ್ತ ಉಪ ಮುಖ್ಯಮಂತ್ರಿ ಬೆಂಗಳೂರು ಸುತ್ತಾಟ ನಡೆಸುತ್ತಿದ್ದಾರೆ.
ನಗರಾಭಿವೃದ್ಧಿ ಸಚಿವರಾದ ಡಾ.ಜಿ. ಪರಮೇಶ್ವರ, ಮಳೆಹಾನಿ ಪ್ರದೇಶಗಳಾದ ವಿಜಯನಗರ, ಮಲ್ಲೇಶ್ವರ, ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಭೇಟಿ ನೀಡಿ ಮಳೆಯಿಂದ ಆದ ಅನಾಹುತದ ಕುರಿತು ಪರಿಶೀಲನೆ ನಡೆಸಿದರು.
ಪ್ರಾರಂಭದಲ್ಲಿ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಮೂರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದವು. ವಿಜಯನಗರಕ್ಕೆ ತೆರಳಿದ ಅವರು ರಸ್ತೆ ಬಳಿ ನೆಲಕ್ಕುರುಳಿದ ಮರಗಳನ್ನು ವೀಕ್ಷಿಸಿದರು. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆ ಆಲಿಸಿದರು.
ನೆಲಕ್ಕುರುಳುದ ರೆಂಬೆಗಳನ್ನು ಕೂಡಲೇ ತೆರವು ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಜೊತೆಗೆ ಮಳೆಯಿಂದಾಗಿ ವಿದ್ಯುತ್ ಲೈನ್ ಕಡಿತಗೊಂಡಿದ್ದು, ಕೂಡಲೇ ಸರಿಪಡಿಸುವಂತೆಯೂ ಬೆಸ್ಕಾಂ ಸಿಬ್ಬಂದಿಗೆ ಸೂಚಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನದಿಂದ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, 500 ಕ್ಕೂ ಹೆಚ್ಚು ಮರಗಳು ಹಾನಿಯಾಗಿದೆ. 100 ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದೆ. ರಾಜ್ಯದ ಕೆಲವೆಡೆ 120 ಮೀ.ಮೀ ಗೂ ಅಧಿಕ ಮಳೆಯಾಗಿದೆ. ಬಿರುಗಾಳಿ ಇದ್ದ ಕಾರಣ ಹೆಚ್ಚು ಮರ ನೆಲಕ್ಕುರುಳಿದೆ. ಮರಗಳ ತೆರವು, ವಿದ್ಯುತ್ ಲೈನ್ ಸರಿಪಡಿಸುವುದು ಸೇರಿ ಇತರೆ ಮಳೆ ಹಾನಿ ಸರಿಪಡಿಸಲು ಬಿಬಿಎಂಪಿ, ಬೆಸ್ಕಾಂ ಸೇರಿ ಇತರೆ ಇಲಾಖೆಗಳ 61 ತಂಡಗಳು ಕೆಲಸ ಮಾಡುತ್ತಿವೆ . ಜೊತೆಗೆ ಬಿಬಿಎಂಪಿ ಸಹಾಯ ವಾಣಿ ಸಹಿತ ಇರುವುದರಿಂದ ಸಮಸ್ಯೆಗಳು ಕೂಡಲೇ ತಿಳಿದು ಬರುತ್ತಿದೆ ಎಂದರು.
ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದೆ. ಅದಕ್ಕೂ ಈಗಾಗಲೇ ಬಿಬಿಎಂಪಿ ಸಿದ್ಧವಾಗಿದೆ. ಒಂದು ತಿಂಗಳು ಪೂರ್ವಭಾವಿಯಾಗಿ ಮೆನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವ ಸಂಬಂಧ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದ್ದೆ. ಹೀಗಾಗಿ ಮಳೆಯಾದರೂ ತಗ್ಗು ಪ್ರದೇಶದಲ್ಲಿ ಪ್ರವಾಹದಂಥ ಪರಿಸ್ಥಿತಿ ಎದುರಾಗಿಲ್ಲ ಎಂದರು.