ಬಂಧಿತ ಮಹಿಳೆಯನ್ನು ಪಲಾ ನಿವಾಸಿ ಆಶಾ ಸುರೇಶ್ (36) ಎಂದು ಗುರುತಿಸಲಾಗಿದೆ.
ತಿರುವನಂತಪುರಂ ಮೂಲದ ಸತೀಶ್ (38) ಜತೆ 2006ರಲ್ಲಿ ಮದುವೆ ಆಗಿದ್ದಾರೆ. ಇಬ್ಬರು ಪಲಾದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆರಂಭದಲ್ಲಿ ಸತೀಶ್ ತನ್ನ ಬಿಜಿನೆಸ್ನಲ್ಲಿ ತುಂಬಾ ಹೋರಾಟ ನಡೆಸಬೇಕಾಯಿತು. ಯಾವಾಗ ಐಸ್ ಕ್ರೀಮ್ ವ್ಯವಹಾರವನ್ನು ಶುರು ಮಾಡಿದರೂ ಸತೀಶ್ ಜೀವನ ಕೂಡ ಬದಲಾಯಿತು. ಒಳ್ಳೆಯ ಲಾಭ ದೊರೆತಿದ್ದರಿಂದ 2012ರಲ್ಲಿ ಸತೀಶ್ ಪಲಕ್ಕಾಡ್ನಲ್ಲಿ ಒಂದು ಮನೆಯನ್ನು ಖರೀದಿಸಿದರು.
ಪೊಲೀಸರ ಪ್ರಕಾರ ಪತ್ನಿ ಆಶಾ, ಕ್ಷುಲ್ಲಕ ಕಾರಣಗಳಿಗೆ ಪತಿಯೊಂದಿಗೆ ಆಗಾಗ ಕ್ಯಾತೆ ತೆಗೆಯುತ್ತಿದ್ದಳಂತೆ. ಇದರ ನಡುವೆ ಸಮಯ ಕಳೆದಂತೆ ಸತೀಶ್ ತನ್ನ ಆರೋಗ್ಯದಲ್ಲಿ ಏರುಪೇರಾಗುವುದನ್ನು ಗಮನಿಸಿದ್ದಾರೆ. ಹೆಚ್ಚು ಸುಸ್ತು ಮತ್ತು ಸಂಕಟವಾಗುವುದನ್ನು ಕಂಡ ಸತೀಶ್ ವೈದ್ಯರನ್ನು ಸಂಪರ್ಕಿಸುತ್ತಾರೆ. ಕಡಿಮೆ ಸಕ್ಕರೆ ಮಟ್ಟವೇ ನಿಮ್ಮ ಆರೋಗ್ಯ ಏರುಪೇರಿಗೆ ಕಾರಣ ಎಂದು ಪರೀಕ್ಷಿಸಿದ ವೈದ್ಯರು ತಿಳಿಸುತ್ತಾರೆ. ಬಳಿಕ ಔಷಧಿ ತೆಗೆದುಕೊಂಡರು ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರುವುದಿಲ್ಲ.
2021ರ ಸೆಪ್ಟೆಂಬರ್ ತಿಂಗಳಲ್ಲಿ ಸತೀಶ್ ಮನೆಯಲ್ಲಿ ಊಟವುದನ್ನು ಕೆಲ ದಿನಗಳ ತಪ್ಪಿಸಿದಾಗ ಆರೋಗ್ಯ ಸುಧಾರಿಸುತ್ತಿರುವುದನ್ನು ಗಮನಿಸುತ್ತಾರೆ. ಇದಾದ ಬಳಿಕ ಆತನ ಪತ್ನಿಯ ಗೆಳತಿಯನ್ನು ಭೇಟಿ ಮಾಡಿ ಊಟದಲ್ಲಿ ಏನಾದರೂ ಬೆರಸಿ ಕೊಡುತ್ತಿದ್ದಾಳಾ ಒಮ್ಮೆ ನೋಡಿ ಹೇಳಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಸ್ನೇಹಿತೆಯೊಂದಿಗೆ ಮಾತನಾಡುವಾಗ ಆಶಾ ಎಲ್ಲವನ್ನು ಬಾಯಿ ಬಿಡುತ್ತಾಳೆ. ಪ್ರತಿದಿನ ಊಟದಲ್ಲಿ ಡ್ರಗ್ಸ್ ಬೆರೆಸುತ್ತಿರುವುದಾಗಿ ಹೇಳುತ್ತಾಳೆ. ಅಲ್ಲದೆ, ಮೆಡಿಸಿನ್ನ ಫೋಟೋವನ್ನು ಕೂಡ ಸ್ನೇಹಿತೆಗೆ ರವಾನಿಸುತ್ತಾಳೆ. ಇದಾದ ಬಳಿಕ ಸತೀಶ್ಗೆ ಪತ್ನಿಯ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಬಳಿಕ ಮನೆಯ ಸಿಸಿಟಿವಿಯನ್ನು ಪರಿಶೀಲಿಸಿ ಪತ್ನಿಯ ಕೃತ್ಯವಿರುವ ದೃಶ್ಯದ ಸಮೇತ ಪೊಲೀಸ್ ಠಾಣೆಗೆ ತೆರಳಿ ಸತೀಶ್ ದೂರು ನೀಡುತ್ತಾನೆ.