ಬಿಎಸ್ವೈ ಪದತ್ಯಾಗವೋ? ಮುಂದುವರಿಕೆಯೋ? ಕುತೂಹಲಕ್ಕಿಂದು ತೆರೆ!

ಸೋಮವಾರ, 26 ಜುಲೈ 2021 (08:25 IST)
ಬೆಂಗಳೂರು(ಜು.26): ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಉದ್ಭವಿಸಿದ್ದ ಕುತೂಹಲಕ್ಕೆ ಸೋಮವಾರ ತೆರೆ ಬೀಳುವ ನಿರೀಕ್ಷೆ ಇದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವರೊ ಅಥವಾ ಮುಂದುವರೆಯುವರೊ ಎಂಬುದರ ಕ್ಲೈಮ್ಯಾಕ್ಸ್ ಗೊತ್ತಾಗಲಿದೆ.

* ಹೈಕಮಾಂಡ್ ಸಂದೇಶಕ್ಕೆ ಕಾದಿರುವ ಯಡಿಯೂರಪ್ಪ, ಬಿಜೆಪಿ
* ಇಂದು ಸಿಎಂ ಕ್ಲೈಮ್ಯಾಕ್ಸ್
* ಬಿಎಸ್ವೈ ಪದತ್ಯಾಗವೋ? ಮುಂದುವರಿಕೆಯೋ? ಕುತೂಹಲಕ್ಕಿಂಂದು ತೆರೆ
* ಇಂದು ಮಧ್ಯಾಹ್ನ ದಿಲ್ಲಿಯಿಂದ ಸಂದೇಶ ಬರುವ ಸಾಧ್ಯತೆ: ತೀವ್ರ ಸಂಚಲನ

ಹೈಕಮಾಂಡ್ನ ಸಂದೇಶಕ್ಕೆ ಕಾಯುತ್ತಿರುವ ಯಡಿಯೂರಪ್ಪ ಅವರಿಗೆ ಭಾನುವಾರ ರಾತ್ರಿವರೆಗೂ ಪಕ್ಷದ ಹೈಕಮಾಂಡ್ನಿಂದ ಯಾವುದೇ ರೀತಿಯ ಸಂದೇಶ ರವಾನೆಯಾಗಲಿಲ್ಲ. ಹೀಗಾಗಿ, ಸೋಮವಾರ ರಾಜೀನಾಮೆ ನೀಡುವಂತೆ ಬಂದರೆ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಒಂದು ವೇಳೆ ರಾಜೀನಾಮೆ ನೀಡುವುದು ಬೇಡ ಎಂಬ ಸಂದೇಶ ಬಂದಲ್ಲಿ ಇನ್ನಷ್ಟುಕಾಲ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ಸಂಭವವಿದೆ.
ಒಟ್ಟಿನಲ್ಲಿ ಸೋಮವಾರ ರಾಜ್ಯ ಬಿಜೆಪಿ ಹಾಗೂ ಯಡಿಯೂರಪ್ಪ ಪಾಲಿಗೆ ಮುಖ್ಯವಾದ ದಿನವಾಗಿದ್ದು, ಕೇವಲ ಬಿಜೆಪಿಯಷ್ಟೇ ಅಲ್ಲದೆ ಇತರ ರಾಜಕೀಯ ಪಕ್ಷಗಳಲ್ಲೂ ತೀವ್ರ ಕುತೂಹಲ ಮನೆ ಮಾಡಿದೆ.
ಈ ನಡುವೆ ಯಡಿಯೂರಪ್ಪ ಅವರು ತಾವು ಹೈಕಮಾಂಡ್ ಸಂದೇಶಕ್ಕಾಗಿ ಕಾಯುತ್ತಿರುವೆ ಎಂಬ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಹೈಕಮಾಂಡ್ ಯಾವ ಸಂದೇಶ ನೀಡುತ್ತೋ ಅದನ್ನು ಪಾಲಿಸುವೆ ಎಂದೂ ಅವರು ಪುನರುಚ್ಚರಿಸಿದ್ದಾರೆ. ಹೀಗಾಗಿ, ಇದೀಗ ಪಕ್ಷದ ಹೈಕಮಾಂಡ್ ಮುಂದಿನ ನಿರ್ಧಾರವನ್ನು ತಿಳಿಸಬೇಕಾಗಿದೆ.
ಇದೇ ವೇಳೆ ಗೋವಾದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿರುವುದು ಗೊಂದಲಕ್ಕೆ ಕಾರಣವಾಯಿತು. ಅವರ ಹೇಳಿಕೆ ಬೆನ್ನಲ್ಲೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬಹುದು ಎಂಬ ವದಂತಿಗಳು ದಟ್ಟವಾಗಿ ಹಬ್ಬಿದವು.
ಪಕ್ಷದ ಉನ್ನತ ಮೂಲಗಳ ಪ್ರಕಾರ, ಸೋಮವಾರವೇ ಯಡಿಯೂರಪ್ಪ ಅವರಿಗೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚನೆ ನೀಡುವ ಸಾಧ್ಯತೆಯಿದೆ. ಆದರೆ, ಮುಂದಿನ ಮುಖ್ಯಮಂತ್ರಿ ಆಯ್ಕೆ ಗೊಂದಲ ಮುಂದುವರೆದಿರುವುದು ಮತ್ತು ಯಡಿಯೂರಪ್ಪ ಪರ ಮಠಾಧೀಶರು ಭಾರಿ ಸಂಖ್ಯೆಯಲ್ಲಿ ಬಹಿರಂಗವಾಗಿ ಬೆಂಬಲಕ್ಕೆ ನಿಂತಿರುವುದರಿಂದ ಇನ್ನಷ್ಟುಕಾಲ ಮುಂದುವರೆಸುವ ಸಂಭವವನ್ನೂ ಅಲ್ಲಗಳೆಯುವಂತಿಲ್ಲ ಎನ್ನಲಾಗಿದೆ.
ರಾಜೀನಾಮೆ ಹೊಸ್ತಿಲಲ್ಲಿ ನಿಂತಿರುವ ಯಡಿಯೂರಪ್ಪ ಅವರು ಭಾನುವಾರ ಬೆಳಗಾವಿ ಜಿಲ್ಲೆಗೆ ತೆರಳಿ ಮಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಿ ವಾಪಸಾದರು. ಸೋಮವಾರ ಬೆಳಗ್ಗೆ ನಗರದ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಕಾರ್ಗಿಲ್ ವಿಜಯ ದಿವಸ ಆಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ 11 ಗಂಟೆಗೆ ವಿಧಾನಸೌಧದಲ್ಲಿ ಸರ್ಕಾರ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಷ್ಟರೊಳಗಾಗಿ ಹೈಕಮಾಂಡ್ನಿಂದ ಸಂದೇಶ ಬಂದಲ್ಲಿ ಮಧ್ಯಾಹ್ನ ಅಥವಾ ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಕಂಡು ರಾಜೀನಾಮೆ ಪತ್ರ ಸಲ್ಲಿಸಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ