ಸಿಎಂ ಪಾಲ್ಗೊಳ್ಳುವ ಸಭೆಯಿಂದ ದೂರ ಉಳಿಯಲು ಕೈ ಶಾಸಕರು ನಿರ್ಧಾರ?

ಬುಧವಾರ, 12 ಡಿಸೆಂಬರ್ 2018 (19:37 IST)
ವಿಧಾನಮಂಡಲದ ಅಧಿವೇಶನ ಮುಗಿದ ನಂತರ ಸಂಪುಟ ವಿಸ್ತರಣೆಯಾಗಲೇಬೇಕು ಎಂದು ಬಿಗಿ ಪಟ್ಟು ಹಿಡಿದಿರುವ ಕಾಂಗ್ರೆಸ್ ಸಚಿವಾಕಾಂಕ್ಷಿ ಶಾಸಕರುಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಪಾಲ್ಗೊಳ್ಳಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಬೇಕೇ, ಇಲ್ಲವೇ, ಸಂಪುಟ ವಿಸ್ತರಣೆಯಾಗುವವರೆಗೂ ಶಾಸಕಾಂಗ ಪಕ್ಷದ ಸಭೆಯಿಂದ ದೂರ ಉಳಿಯಬೇಕೇ ಎಂಬ ಬಗ್ಗೆ ಚಿಂತನ-ಮಂಥನದಲ್ಲಿ ತೊಡಗಿದ್ದಾರೆ.

ಒಂದಲ್ಲ ಒಂದು ನೆಪ ಹೇಳಿ ಕಳೆದ ಆರು ತಿಂಗಳಿಂದ ಸಂಪುಟ ವಿಸ್ತರಣೆಯನ್ನು ಮುಂದಕ್ಕೆ ಹಾಕುತ್ತಿರುವುದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಹಿರಿಯ ಶಾಸಕರುಗಳು ವಿಧಾನಮಂಡಲದ ಅಧಿವೇಶನ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಒತ್ತಡವನ್ನು ಹೇರುವ ಸಂಬಂಧ ಚರ್ಚೆ ನಡೆಸಿದ್ದು  ಇಂದು ಇಲ್ಲ ನಾಳೆ ಸಚಿವಾಕಾಂಕ್ಷಿ ಶಾಸಕರುಗಳೆಲ್ಲರೂ ಒಟ್ಟಾಗಿ ಸಭೆ ಸೇರಲಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿ ರಾಜಕೀಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಆದರೆ, ಸಭೆಯಿಂದ ದೂರ ಉಳಿದು ಸಂಪುಟ ವಿಸ್ತರಣೆಗೆ ಒತ್ತಡ ಹೇರುವ ತಂತ್ರವನ್ನು ಸಚಿವಾಕಾಂಕ್ಷಿಗಳು ಅನುಸರಿಸಲಿದ್ದಾರೆ. ಆದರೆ ಇದಕ್ಕೆ ಒಪ್ಪದ ಕೆಲ ಶಾಸಕರು ಶಾಸಕಾಂಗ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಬಗ್ಗೆ ತೋರುತ್ತಿರುವ ತಾರತಮ್ಯ ನೀತಿ ಎತ್ತಿ ತೋರುವುದು ಸೂಕ್ತ ಎಂಬುದು ಕೆಲವರ ಅಭಿಪ್ರಾಯವಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ