ಕೊಡಗು: ಇಂದು ಕೊಡಗು ಜಿಲ್ಲೆಯ ಹಲವು ಕಡೆ ಉತ್ತಮ ಗಾಳಿ ಮಳೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.
ಇಂದು ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದೆ. ಅದಲ್ಲದೆ ವಿರಾಜಪೇಟೆಯಲ್ಲಿ ಅರಾಜಪಟ್ಟು ಗ್ರಾಮದಲ್ಲಿ ಉತ್ತಮ ಮಳೆಯಾಗಿದೆ ಎಂದು ಹೇಳಲಾಗಿದೆ.
ಬೇಸಿಗೆಯ ತಾಪಕ್ಕೆ ಸುಸ್ತಾಗಿರುವ ಮಂದಿಗೆ ಮಳೆಯ ಸಿಂಚನ ಹೊಸ ಪುಳಕವನ್ನು ತಂದಿದೆ. ಸಾಮಾಜಿಕ ಜಾಲತಾಣದಲ್ಲಿ ಮಳೆಯ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿ ಖುಷಿ ಪಟ್ಟಿದ್ದಾರೆ.
ಇನ್ನೂ ಪೆರಿಯಾಪಟ್ಟಣ, ಕುಶಾಲನಗರದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು ಸೋಮವಾರ ರಾತ್ರಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
2 ದಿನಗಳ ಹಿಂದೆಯೇ ಹವಾಮಾನ ಇಲಾಖೆ ಇನ್ನೂ ಮೂರು ದಿನ ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹೇಳಿತ್ತು. ಅದರಂತೆ ಭಾನುವಾರ ಬೀದರ್, ಚಿಕ್ಕಮಗಳೂರಿನಲ್ಲಿ ಮಳೆಯಾಗಿದೆ.
ಮಾರ್ಚ್ ಅಂತ್ಯಕ್ಕೆ ಬೆಂಗಳೂರಿನಲ್ಲೂ ಮಳೆ:
ಹವಾಮಾನ ಇಲಾಖೆ ಪ್ರಕಾರ ಮಾರ್ಚ್ ಅಂತ್ಯದ ವೇಳೆಗೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ ಮೊದಲನೇ ವಾರ ಅಥವಾ ಎರಡನೇ ವಾರದ ವೇಳೆಗೆ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹೇಳಿದೆ.