ಮಕ್ಕಳಿಗೆ ವಿಷ ಹಾಕಿ ಮಹಿಳೆ ನೇಣಿಗೆ ಶರಣು
ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು 3 ಮಕ್ಕಳಿಗೆ ವಿಷ ಉಣಿಸಿ ಮಹಿಳೆ ತಾನೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದಿದೆ. ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಉಸ್ನಾ ಕೌಸರ್ ಎಂಬಾಕೆ ತನ್ನ 3 ಜನ ಮಕ್ಕಳಿಗೆ ವಿಷ ಉಣಿಸಿ ,ಕಣ್ಣೆದುರೇ ಮಕ್ಕಳು ಮೃತಪಟ್ಟ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚನ್ನಪಟ್ಟಣದಲ್ಲಿ ಕಾರ್ ಮೆಕಾನಿಕ್ ಆಗಿದ್ದ ಗಂಡ ಅಖಿಲ್ ಅಹಮದ್ ಅಕ್ರಮ ಸಂಬಂಧ ಹೊಂದಿದ್ದು, ಈತ ಪರ ಸ್ತ್ರೀ ಜೊತೆ ಬೆತ್ತಲೆ ಇದ್ದ ಫೋಟೋಗಳು ಪತ್ತೆಯಾಗಿದ್ದವು. ಇದನ್ನು ನೋಡಿದ ಪತ್ನಿ ಕೌಸರ್ ಪ್ರಶ್ನೆ ಮಾಡಿದ್ದಳು. ಈ ಕಾರಣಕ್ಕೆ ಮನೆಯಲ್ಲಿ ಜೋರು ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ಪೋಷಕರು ಇಬ್ಬರನ್ನು ರಾಜಿ ಮಾಡಿದ್ದರು. ನಂತರ ಪತಿ ಅಖಿಲ್ ಅಹಮದ್ ಅಕ್ರಮ ಸಂಬಂಧ ಬಿಡುವುದಾಗಿ ಹೇಳಿದ್ದ. ಉರುಫ್ ಹಿನ್ನೆಲೆ ಬೇಗ ಮನೆಗೆ ಬರ್ತೀನಿ ಎಂದು ಅಖಿಲ್ ಕೆಲಸಕ್ಕೆ ಹೋಗಿದ್ದ. ಆದರೆ ಸಂಜೆ ಆದರೂ ಮನೆಗೆ ಬೇಗ ಬಾರದೆ ಇದ್ದಾಗ ಕೌಸರ್ ಮತ್ತು ಅಖಿಲ್ ನಡುವೆ ಫೋನ್‌ನಲ್ಲಿ ಮತ್ತೆ ಜಗಳವಾಗಿದೆ. ಕೌಸರ್ ಮನನೊಂದು ಕೆಲಸದಿಂದ ಮನೆಗೆ ಬಂದು ಮಕ್ಕಳಿಗೆ ಅನ್ನದಲ್ಲಿ ವಿಷ ಹಾಕಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಅಖಿಲ್ ಅಹಮದ್ ಹಾಗೂ ಕುಟುಂಬ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರೀಶೀಲನೆ ನಡೆಸಿದ್ದಾರೆ. ಮದ್ದೂರು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.