ಬೆಂಗಳೂರು: ಶೃತಿ (31) ಎನ್ನುವ ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ಸೋಮವಾರ ತಡ ರಾತ್ರಿ ಬೆಳಕಿಗೆ ಬಂದಿತ್ತು. ನೇಣು ಬಿಗಿದುಕೊಂಡು ತನ್ನ ಪ್ರಾಣ ತೆಗೆದುಕೊಂಡಿರುವ ಕಾರಣ ವರದಕ್ಷಿಣೆ ಕಿರುಕುಳ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದರು. ಪತಿ ಮಿಥುನ್ ರೆಡ್ಡಿಯನ್ನು ತಡ ರಾತ್ರಿ ವಶಕ್ಕೆ ಪಡೆದಿದ್ದ ರಾಮಮೂರ್ತಿ ನಗರ ಪೊಲೀಸರು ಹೆಚ್ಚಿನ ತನಿಖೆ ನೆಡೆಸಿ ಇದೀಗ ಬಂಧಿಸಿದ್ದಾರೆ.
2014ರಲ್ಲಿ ಮಿಥುನ್ ರೆಡ್ಡಿ ಜೊತೆ ಮದುವೆಯಾಗಿದ್ದ ಮಹಿಳೆ, ಆತ ಬ್ಯಾಡ್ಮಿಂಟನ್ ತರಬೇತುದಾರನಾಗಿದ್ದ. ಇತ್ತೀಚೆಗೆ ಕುಡಿತದ ಚಟ ಕೂಡ ಅಂಟಿಸಿಕೊಂಡಿದ್ದ ಮಿಥುನ್ ಹೆಂಡತಿಯ ಜೊತೆಗೆ ಪ್ರತಿ ದಿನ ವರದಕ್ಷಿಣೆ ತರುವಂತೆ ಜಗಳ ಮಾಡುತ್ತಿದ್ದ. ದಂಪತಿಗೆ ನಾಲ್ಕುವರೆ ವರ್ಷದ ಗಂಡು ಮಗು ಇದೆ. ಸೋಮವಾರ ತಡ ರಾತ್ರಿ ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಶೃತಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆ:
ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ ಗೃಹಿಣಿ ಶೃತಿ ಏಳು ವರ್ಷದ ಹಿಂದೆ ಮಿಥುನ್ ನನ್ನು ವರಿಸಿದ್ದಳು. ವರದಕ್ಷಿಣೆ ನೀಡುವಂತೆ ಗಂಡ ಮಿಥುನ್, ಅತ್ತೆ ಭಾಗ್ಯ ಹಾಗೂ ಮಾವ ಕಿರುಕುಳ ಕೂಡ ಕೊಡುತ್ತಿದ್ದರು ಎನ್ನಲಾಗುತ್ತಿದೆ.