ಬಂಧನ ತುರ್ತುಸ್ಥಿತಿಗಿಂತ ಹೀನಾಯ : ಶಿವಕುಮಾರ್

ಬುಧವಾರ, 15 ಜೂನ್ 2022 (10:44 IST)
ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ಗಾಂಧಿ ಅವರಿಗೆ ಇಡಿ ಸಮನ್ಸ್ ಜಾರಿಗೊಳಿಸಿ ವಿಚಾರಣೆ ನಡೆಸಿರುವುದನ್ನು ಖಂಡಿಸಿ,

ದೆಹಲಿಯ ಎಐಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರನ್ನು ಬಂಧಿಸಿರುವುದು ನೀಚ ರಾಜಕಾರಣ, ಇದು ತುರ್ತು ಪರಿಸ್ಥಿತಿಗೂ ಮೀರಿದ ಹೀನಾಯ ಸ್ಥಿತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಮ್ಮ ನಾಯಕರು ಯಾವುದೇ ತಪ್ಪು ಮಾಡಿಲ್ಲ. ಅಂದ ಮೇಲೆ ನಮ್ಮ ನಾಯಕರಿಗೆ ಸಮನ್ಸ್ ಜಾರಿ ಮಾಡಿರುವುದನ್ನು ನಾವು ವಿರೋಧಿಸುವುದು, ಪ್ರತಿಭಟಿಸುವುದು ನ್ಯಾಯಬದ್ಧವಾಗಿದೆ.

ಪ್ರತಿಭಟನೆ ಮಾಡುವುದು ಈ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು. ಆದರೆ, ಬಿಜೆಪಿ ನಮಗೆ ಪ್ರತಿಭಟಿಸುವ ಅವಕಾಶವನ್ನೂ ನೀಡದೆ ಹೊಸ ಸಂಪ್ರದಾಯ ಆರಂಭಿಸಿದೆ. ನೆಹರೂ ಕುಟುಂಬದವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ಇಂತಹ ನೀಚ ರಾಜಕಾರಣವನ್ನು ಹಿಂದೆಂದೂ ಕಂಡಿಲ್ಲ.

ಇದು ತುರ್ತು ಪರಿಸ್ಥಿತಿಗೂ ಮೀರಿದ ಹೀನಾಯ ಸ್ಥಿತಿ. ನಾವಿದನ್ನು ಉಗ್ರವಾಗಿ ಖಂಡಿಸುತ್ತೇವೆ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ. ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಹೇಳಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ