ಯೂ-ಟರ್ನ್ ಹೊಡೆದ ಕುಸ್ತಿಪಟುವಿನ ತಂದೆ!
ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧದ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಬ್ರಿಜ್‌ಭೂಷಣ್ ವಿರುದ್ಧ ದೂರು ನೀಡಿದ್ದ ಅಪ್ರಾಪ್ತೆಯ ತಂದೆ ಇದೀಗ ಯೂ-ಟರ್ನ್ ಹೊಡೆದಿದ್ದಾರೆ. ಬ್ರಿಜ್ಭೂಷಣ್ರಿಂದ ಯಾವುದೇ ಲೈಂಗಿಕ ಕಿರುಕುಳ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಏಪ್ರಿಲ್ನಲ್ಲಿ ದೆಹಲಿ ಪೊಲೀಸರಿಗೆ ಬ್ರಿಜ್ ವಿರುದ್ಧ ಅಪ್ರಾಪ್ತೆ ಸೇರಿದಂತೆ 7 ಮಂದಿ ದೂರು ಸಲ್ಲಿಸಿದ್ದರು. ಅಪ್ರಾಪ್ತೆಯ ಹೇಳಿಕೆಯನ್ನು ಆಧರಿಸಿ ಪೊಲೀಸರು ಬ್ರಿಜ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಆ ಬಳಿಕ ಮೇ 10ಕ್ಕೆ ಮ್ಯಾಜಿಸ್ಪ್ರೇಟ್ ಮುಂದೆ ಅಪ್ರಾಪ್ತೆಯ ಹೇಳಿಕೆ ದಾಖಲಿಸಲಾಗಿತ್ತು. ಬಳಿಕ ಅಪ್ರಾಪ್ತೆಯ ತಂದೆ ಕೂಡಾ ಬ್ರಿಜ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಹೇಳಿಕೆ ದಾಖಲಿಸಿದ್ದರು. ಆದರೆ ಜೂನ್ 5ಕ್ಕೆ ಮ್ಯಾಜಿಸ್ಪ್ರೇಟ್ ಮುಂದೆ ಮತ್ತೊಮ್ಮೆ ಹಾಜರಾಗಿ ಹೇಳಿಕೆ ಬದಲಿಸಿರುವ ಅಪ್ರಾಪ್ತೆಯ ತಂದೆ, ಸಿಟ್ಟಿನಿಂದ ಸುಳ್ಳು ಹೇಳಿಕೆ ನೀಡಿದ್ದೆ ಎಂದು ಒಪ್ಪಿಕೊಂಡಿದ್ದಾರೆ.