ಇನ್ಮುಂದೆ ತಮ್ಮ ಕಟೌಟ್ ಹಾಕದಂತೆ ಯಶ್ ಮನವಿ

geetha

ಮಂಗಳವಾರ, 9 ಜನವರಿ 2024 (14:00 IST)
ಗದಗ-ಮೂವರು ಅಭಿಮಾನಿಗಳ ಸಾವಿನ್ನಪ್ಪಿದ ದುರ್ಘಟನೆ ಮಾಸುವ ಮುನ್ನವೇ ರಾಕಿಂಗ್‌ ಸ್ಟಾರ್‌ ಯಶ್ ಮತ್ತೋರ್ವ ಅಭಿಮಾನಿ ಇಂದು ಮೃತಪಟ್ಟಿದ್ದಾರೆ. ಮೃತನನ್ನು ನಿಖಿಲ್ ಗೌಡ ಎಂದು ಗುರುತಿಸಲಾಗಿದ್ದು, ಈತ ಗದಗದ ಬಿಂಕದಕಟ್ಟಿ ನಿವಾಸಿ. ಈತ ಲಕ್ಷ್ಮೇಶ್ವರ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ. ಗದಗ ಜಿಲ್ಲೆ ಸೊರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬದ ಅಂಗವಾಗಿ ತಡರಾತ್ರಿ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಮುರಳಿ, ನವೀನ್, ಹನುಮಂತ ಎಂಬ ಮೂವರು ನಿಧನರಾಗಿದ್ದು, ಉಳಿದ ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಹೀಗಾಗಿ ಮೃತ ಅಭಿಮಾನಿಗಳ ಮನೆಗೆ ಭೇಟಿ ಕೊಟ್ಟ ಯಶ್‌, ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲು ತೆರಳಿದ್ದರು. ಈ ವೇಳೆ ಯಶ್‌ ನೋಡಲು ನಿಖಿಲ್‌ ಗದಗಕ್ಕೆ ಬಂದಿದ್ದ. ಬಳಿಕ ಯಶ್ ಹುಬ್ಬಳ್ಳಿಗೆ ವಾಪಸ್ಸಾಗುವಾಗ ತನ್ನ ಬೈಕಿನಲ್ಲಿ ಯಶ್ ವಾಹನ ಫಾಲೋ ಮಾಡಲು ಮುಂದಾಗಿದ್ದ. ಈ ವೇಳೆ ಪೊಲೀಸ್ ವಾಹನಕ್ಕೆ ‌ಡಿಕ್ಕಿ ಹೊಡೆದು ಅಪಘಾತವಾಗಿತ್ತು. ಪರಿಣಾಮ ನಿಖಿಲ್‌ ಕೂಡ ಗಂಭೀರ ಗಾಯಗೊಂಡಿದ್ದು ಸಾವನಪ್ಪಿದ್ದಾನೆ.

ರಾಕಿಂಗ್ ಸ್ಟಾರ್ ಯಶ್ ಅವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂವರು ಅಭಿಮಾನಿಗಳ ಕುಟುಂಬಕ್ಕೆ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಇದೇ ವೇಳೆ, ಇನ್ಮುಂದೆ ನನ್ನ ಬ್ಯಾನರ್ ಎಲ್ಲೂ ಕಟ್ಟಬೇಡಿ, ಎಲ್ಲಿಯೂ ಕಟೌಟ್ ಹಾಕಬೇಡಿ ಎಂದು ಫ್ಯಾನ್ಸ್‌ಗೆ ಯಶ್ ಮನವಿ ಮಾಡಿದ್ದಾರೆ.

ಗದಗದ ಸೊರಣಗಿ ಗ್ರಾಮದಲ್ಲಿ ಮೃತ ಮುರಳಿ, ನವೀನ್, ಹನುಮಂತ ಮೂವರ ನಿವಾಸಗಳಿಗೆ ಯಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಲ್ಲದೇ ಅವರ ಜೊತೆ ಇರೋದಾಗಿ ಭರವಸೆ ನೀಡಿದ್ದಾರೆ. ಅವರ ಕುಟುಂಬಕ್ಕೆ ಸಹಾಯ ಅದನ್ನು ಮಾಡುವುದಾಗಿ ಎಂದು ಯಶ್ ಭರವಸೆ ನೀಡಿದ್ದಾರೆ.. ತಾವು ಸದಾ ಅಭಿಮಾನಿಗಳ ಬೆಂಬಲಕ್ಕೆ ನಿಂತಿದ್ದು ಯಾರೂ ಆತಂಕ ಪಡುವ ಅಗತ್ಯವಿಲ್ಲ . ಈ ದುರ್ಘಟನೆ ಆಗಬಾರದಿತ್ತು, ತುಂಬಾ ದುಃಖ ಆಗಿದೆ ಎಂದು ಯಶ್ ಹೇಳಿದ್ದಾರೆ. ನಿಮ್ಮ ಪ್ರೀತಿಗೆ ನಾನು ಸದಾ ಆಭಾರಿಯಾಗಿದ್ದೇನೆ. ಕಲಾವಿದರ ಮೇಲೆ ಅಭಿಮಾನ ಇರಲಿ ಆದರೆ ಈ ರೀತಿಯ ಅಭಿಮಾನ ಬೇಡ ಎಂದು ಯಶ್ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ