ಮೈಸೂರು: ಆರ್ ಎಸ್ಎಸ್ ಗೆ ಹೇಳೋರು ಕೇಳೋರು ಯಾರೂ ಇಲ್ಲ ಎನ್ನುವಂತಾಗಿದೆ. ಇನ್ನು ಏನೇ ಕಾರ್ಯಕ್ರಮ ಮಾಡುವುದಿದ್ದರೂ ನಮ್ಮ ಅನುಮತಿ ಪಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ಹೇಳಿಕೆ ನೀಡಿದ್ದಾರೆ.
ಆರ್ ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಸಂಘಟನೆ ವಿರುದ್ಧ ಮುಗಿಬಿದ್ದಿದ್ದಾರೆ. ಆರ್ ಎಸ್ಎಸ್ ಸಮಾಜದಲ್ಲಿ ಧ್ವೇಷ ಬಿತ್ತುವ ಸಂಘಟನೆ. ಹೀಗಾಗಿ ಅದರ ಕಾರ್ಯಕ್ರಮದ ಮೇಲೆ ನಿಯಂತ್ರಣ ಹೇರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು.
ಇದರ ಬಗ್ಗೆ ಇದೀಗ ಸಿಎಂ ಸಿದ್ದರಾಮಯ್ಯ ಪುತ್ರ, ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಸಂಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಬೈಠಕ್ ನಡೆಸಬೇಕಾದರೆ ಪೂರ್ವಾನುಮತಿ ಪಡೆಯಬೇಕು. ಆರ್ ಎಸ್ಎಸ್ ನವರು ಯಾವುದೇ ಪೂರ್ವಾನುಮತಿಯಿಲ್ಲದೇ ಕೆಲಸ ಮಾಡುತ್ತಾರೆ.ಯಾರೂ ಹೇಳೋರು ಕೇಳೋರು ಇಲ್ಲ ಎಂದು ಇಷ್ಟು ದಿನ ನಡೆದುಕೊಂಡು ಬಂದಿದ್ದಾರೆ. ಹೀಗಾಗಿ ಅದಕ್ಕೆ ಕಡಿವಾಣ ಹಾಕಬೇಕು ಎಂದು ಯತೀಂದ್ರ ಹೇಳಿದ್ದಾರೆ.
ಶಾಲೆ, ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸುಮ್ ಸುಮ್ನೇ ಸಭೆ ನಡೆಸುವುದು, ಸಮಾಜದಲ್ಲಿ ವಿಷಪೂರಿತ ಸಿದ್ಧಾಂತಗಳನ್ನು ಹರಡುವುದನ್ನು ಮಾಡಬಾರದು. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದಿದ್ದಾರೆ.