ಸಮ್ಮಿಶ್ರ ಸರಕಾರ ಶೀಘ್ರ ಪತನ: ಭವಿಷ್ಯ ನುಡಿದ ಶಾಸಕ ಯತ್ನಾಳ
ಬುಧವಾರ, 5 ಸೆಪ್ಟಂಬರ್ 2018 (13:55 IST)
ರಾಹುಲ್ ಗಾಂಧಿ ಮಾನಸ ಸರೋವರಕ್ಕೆ ಹೋಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಶಾಸಕ ಭವಿಷ್ಯ ನುಡಿದಿದ್ದಾರೆ.
ಸಧ್ಯದಲ್ಲೆ ರಾಜ್ಯ ಸಮ್ಮಿಶ್ರ ಸರ್ಕಾರ ಉರುಳಲಿದೆ ಎಂದು ಮತ್ತೆ ಭವಿಷ್ಯವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಶ್ರದ್ಧಾಕೇಂದ್ರಗಳ ಪಾವಿತ್ರ್ಯತೆ ಗೊತ್ತಿಲ್ಲ. ಪವಿತ್ರ ಸ್ಥಾನಗಳಿಗೆ ಭೇಟಿ ನೀಡಿ ಚಿಕನ್ ಸೂಪ್ ತಿಂದರೆ ಹೇಗೇ? ಹೀಗಾಗಿ ರಾಹುಲ್ ಭೇಟಿ ನೆಗಟಿವ್ ಆಗಲಿದೆ ಎಂದು ಹೇಳಿದರು.
ನಾನು ಹೇಳಿದ ಭವಿಷ್ಯ ಸತ್ಯವಾಗ್ತಿದೆ. ಕಿತ್ತೂರುರಾಣಿ ಚೆನ್ನಮ್ಮ, ರಾಯಣ್ಣನ ನಾಡು ಬೆಳಗಾವಿಯಲ್ಲಿ ಸರ್ಕಾರ ಉರುಳಿಸುವ ತಯಾರಿ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲೆ ಬೆಂಕಿ ಹೊತ್ತಿ ಉರಿಯುತ್ತಿದೆ. ಜಾರಕಿಹೊಳಿ & ಹೆಬ್ಬಾಳಕರ್ ನಡುವಿನ ಸಂಘರ್ಷ ಸಮ್ಮಿಶ್ರ ಸರ್ಕಾರ ಪತನಕ್ಕೆ ಮುನ್ನುಡಿಯಾಗಲಿದೆ ಎಂದು ಪರೋಕ್ಷವಾಗಿ ಯತ್ನಾಳ ಹೇಳಿದರು.
ಪ್ರಧಾನಿ ಹತ್ಯೆಗೆ ಸಂಚು ಮಾಡಿದವರ ಸಮರ್ಥನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸ್ಕೆಚ್ ಹಾಕಿದವರನ್ನ ಚಿಂತಕರು ಎನ್ನುತ್ತಾರೆ. ಅದೇ ರಾಜೀವ್ ಗಾಂಧಿಯವರನ್ನ ಕೊಂದವರನ್ನ ಭಯೋತ್ಪಾದಕರು ಎನ್ನುತ್ತಾರೆ. ಪ್ರಧಾನಿಗಳಲ್ಲಿ ವ್ಯತ್ಯಾಸವಿದೆಯಾ? ಎಂದು ಪ್ರಶ್ನಿಸಿದರು.