ಜಿಂದಾಲ್ ನಿಂದ ಸಿಎಂಗೆ ಕಿಕ್ ಬ್ಯಾಕ್: ಯಡಿಯೂರಪ್ಪ ಆರೋಪ

ಶನಿವಾರ, 8 ಜೂನ್ 2019 (16:01 IST)
ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಕ್ ಬ್ಯಾಕ್ ಪಡೆದು ಜಿಂದಾಲ್​ಗೆ ಭೂಮಿ ಮಾರಲು ಮುಂದಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಜಿಂದಾಲ್​ಗೆ 2007 ರಲ್ಲಿಯೇ ಸುಮಾರು ಏಳು ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ನೀಡಲಾಗಿತ್ತು.

ಈಗ ಮತ್ತೆ ಅದಕ್ಕೆ ಭೂಮಿ ನೀಡುವ ಅವಶ್ಯಕತೆ ಇಲ್ಲ. ಕಿಕ್ ಬ್ಯಾಕ್ ಪಡೆದು ಕುಮಾರಸ್ವಾಮಿ ಭೂಮಿ ನೀಡಲು ಮುಂದಾಗಿದ್ದಾರೆ. ನಾವು ಧ್ವನಿ ಎತ್ತಿದ್ದರಿಂದ ಈಗ ನೀಡುವ ಭೂಮಿಯಲ್ಲಿ ಅದಿರು ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ. ಭೂಮಿ ನೀಡಿದ ಮೇಲೆ ಈ ನಿಯಮಗಳನ್ನು ಅವರು ಪಾಲಿಸುತ್ತಾರೆಯೇ ಎಂದು ಪ್ರಶ್ನಿಸಿದರು. ರೈತರ ಸಾಲಮನ್ನಾ ಮಾಡದೇ ಇರುವುದು, ಜಿಂದಾಲ್ ಹಗರಣ, ಬರಗಾಲ ಸೇರಿದಂತೆ ಮೂರು ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಇದೇ 13 ಮತ್ತು 14 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಐಷಾರಾಮಿ ಹೋಟೆಲ್​ಗಳಲ್ಲಿ ವಾಸ್ತವ್ಯ ಮಾಡುವುದು ಸರಿಯಲ್ಲ. ಅದು ಅವರಿಗೆ ಶೋಭೆ ತರುವುದಿಲ್ಲ. ರಾಜ್ಯ ಸರ್ಕಾರ ಬದುಕಿಲ್ಲ. ವರ್ಗಾವಣೆಯಲ್ಲಿ ದಂಧೆಯಲ್ಲಿ ಮುಳುಗಿದೆ ಎಂದು ಆರೋಪಿಸಿದರು. ಇನ್ನು ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ಸಿದ್ಧವಾಗಿದ್ದೇವೆ ಎಂಬ ಹೇಳಿಕೆಯನ್ನು ನಾನು ಖಂಡಿಸುತ್ತೇನೆ.

ಯಾರು ಚುನಾವಣೆಗೆ ಹೋಗಲು ಸಿದ್ಧವಿಲ್ಲ. ನೀವು ಅಧಿಕಾರ ನಡೆಸುವುದಿದ್ರೆ ನಡೆಸಿ, ಆಗದಿದ್ದರೆ ಬಿಟ್ಟುಬಿಡಿ ಎಂದಿದ್ದಾರೆ. ಇನ್ನು ಸಿಎಂ ಕುಮಾರಸ್ವಾಮಿ ಶಾಲೆಗಳಿಗೆ ಹೋಗಿ ವಾಸ್ತವ್ಯ ಮಾಡುತ್ತಿದ್ದಾರೆ. ಇದಕ್ಕೆ ನನ್ನ ಆಕ್ಷೇಪಣೆಯಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಈ ಕುರಿತಂತೆ ಬರ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ