ವಿದೇಶ ಪ್ರವಾಸದಿಂದ ಹಿಂದಿರುಗಿದ ಯಡಿಯೂರಪ್ಪ; 25 ದಿನಗಳ ನಂತರ ರಾಜ್ಯಾದ್ಯಂತ ಪ್ರವಾಸ
ಮಂಗಳವಾರ, 24 ಆಗಸ್ಟ್ 2021 (10:00 IST)
ಬೆಂಗಳೂರು (ಆಗಸ್ಟ್ 24); ರಾಜ್ಯ ರಾಜಕಾರಣದಲ್ಲಿ ಯಾವಾಗಲೂ ಸಕ್ರೀವಾಗಿರುತ್ತಿದ್ದ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಕಳೆದ ವಾರ ವಿಶ್ರಾಂತಿಗೆ ಮೊರೆ ಹೋಗಿದ್ದರು.
ಬಸವರಾಜ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ತೆಗೆದುಕೊಂಡ ಬಳಿಕ ಬಿ.ಎಸ್. ಯಡಿಯೂರಪ್ಪ, ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ ತಮ್ಮ ಕುಟುಂಬದ ಸಮೇತ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದರು. ಇದೀಗ ಅವರು ರಾಜ್ಯ ಮರಳಿದ್ದು, "ಮುಂದಿನ 20- 25 ದಿನಗಳ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲಾ ಜಿಲ್ಲೆಗಳಲ್ಲೂ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದ್ದೇನೆ" ಎಂದು ತಿಳಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿರುವ ಬಿ.ಎಸ್. ಯಡಿಯೂರಪ್ಪ, "ಇನ್ನೂ 20- 25 ದಿನಗಳ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇನೆ. ಜಿಲ್ಲಾವಾರು ಭೇಟಿ ನೀಡಿ ಕಾರ್ಯಕರ್ತರ ಜೊತೆ ಸಭೆ ಮಾಡುತ್ತೇನೆ. ಒಂದು ಜಿಲ್ಲೆಗೆ ಒಂದು ದಿನ ಹೋಗುತ್ತೇನೆ. ಬಹಳ ವರ್ಷಗಳ ಬಳಿಕ ನಾನು ವಿದೇಶ ಪ್ರವಾಸ ಹೋಗಿದ್ದೆ. ಸ್ನೇಹಿತರು, ಕುಟುಂಬಸ್ಥರ ಒತ್ತಾಯದ ಮೇರೆಗೆ ಹೋಗಿದ್ದೆ. ಮಾಲ್ಡೀವ್ಸ್ ಒಳ್ಳೆಯ ಸ್ಥಳ, ಎಲ್ಲರು ನೋಡುವಂತದ್ದು, ನಾನು ಸಹ ಐದು ದಿನ ಎಲ್ಲಾ ರಾಜಕೀಯ ಮರೆತು ಖುಷಿಯಾಗಿದ್ದೆ" ಎಂದು ತಿಳಿಸಿದ್ದಾರೆ.