ಜಮೀರ್ ಅಹ್ಮದ್ ಮತ್ತೊಂದು ವಿವಾದ: ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ನೋಟಿಸ್

Krishnaveni K

ಶನಿವಾರ, 16 ನವೆಂಬರ್ 2024 (10:56 IST)
ಬೆಂಗಳೂರು: ಈಗಾಗಲೇ ವಕ್ಫ್ ವಿವಾದ, ಕುಮಾರಸ್ವಾಮಿ ವಿರುದ್ಧ ಜನಾಂಗೀನ ನಿಂದನೆ ಆರೋಪದ ವಿವಾದದಲ್ಲಿ ಸಿಲುಕಿರುವ ಸಚಿವ ಜಮೀರ್ ಅಹ್ಮದ್ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಅವರಿಗೆ ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ನೋಟಿಸ್ ನೀಡಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಮಾಡಿರುವ ಆರೋಪದಲ್ಲಿ ಜಮೀರ್ ಅಹ್ಮದ್ ಗೆ ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ನೋಟಿಸ್ ನೀಡಿದೆ. ಮೂರು ವರ್ಷಗಳ ಹಿಂದೆ ಜಾರಿ ನಿರ್ದೇಶನಾಲಯ ನೀಡಿದ್ದ ವರದಿ ಆಧರಿಸಿ ಲೋಕಾಯುಕ್ತ ಈ ಕ್ರಮಕ್ಕೆ ಮುಂದಾಗಿದೆ. ಸಚಿವರ ಚಾಮರಾಜಪೇಟೆಯ ಮನೆಗೆ ತೆರಳಿದ ಲೋಕಾಯುಕ್ತ ಅಧಿಕಾರಿಗಳು ಡಿಸೆಂಬರ್ 3 ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ.

ಇದು ಇಂದು ನಿನ್ನೆಯ ಪ್ರಕರಣವಲ್ಲ. ಮೂರು ವರ್ಷಗಳ ಹಿಂದೆಯೇ ದಾಖಲಾಗಿದ್ದ ಪ್ರಕರಣವಾಗಿದೆ. ಎಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು. ಎಸಿಬಿ ರದ್ದಾದ ಬಳಿಕ ಆ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ಇದೀಗ ಪ್ರಾಥಮಿಕ ತನಿಖೆ ಮುಗಿಸಿದ್ದಾರೆ.

ಇದೀಗ ಖುದ್ದಾಗಿ ಸಚಿವರೇ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ತಮ್ಮ ಹಣಕಾಸು ವ್ಯವಹಾರಗಳ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜಗಾರಲು ಸೂಚಿಸಲಾಗಿದೆ. ಇದೀಗ ವಕ್ಫ್ ವಿವಾದ, ಕುಮಾರಸ್ವಾಮಿ ಪ್ರಕರಣದಿಂದ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಜಮೀರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ