ಪ್ರತ್ಯೇಕ ಅವಘಡಗಳಲ್ಲಿ 14 ಸಾವು
ಹೈದರಾಬಾದ್ನ ಸಿಕಂದರಾಬಾದ್ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ಓರ್ವ ಮಹಿಳೆ ಸಹಿತ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿಗೆ ನಿಖರ ಕಾರಣ ಏನೆಂಬುದು ತನಿಖೆಯ ಬಳಿಕವಷ್ಟೇ ತಿಳಿಯಬೇಕಿದ್ದು, ಹೊಗೆಯಿಂದ ಉಸಿರುಗಟ್ಟಿ ಸಾವಿಗೀಡಾಗಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. 12 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, ಈ ಪೈಕಿ 6 ಮಂದಿ ಸಾವಿಗೀಡಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತರೆಲ್ಲರೂ ತೆಲಂಗಾಣದ ವಾರಂಗಲ್ ಹಾಗೂ ಖಮ್ಮನ್ ಜಿಲ್ಲೆಯವರಾಗಿದ್ದು, ಕಟ್ಟಡದಲ್ಲಿದ್ದ ಮಾರ್ಕೆಂಟಿಂಗ್ ಕಂಪನಿಯಲ್ಲಿ ಇವರೆಲ್ಲರೂ ಕೆಲಸ ಮಾಡುತ್ತಿದ್ದರು. ಸಂಜೆ 7.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ. ಮತ್ತೊಂದೆಡೆ ಉತ್ತರ ಪ್ರದೇಶಲ್ಲಿ ಕೋಲ್ಡ್ ಸ್ಟೋರೆಜ್ ಗೋದಾಮು ಕುಸಿತ ಸಂಭವಿಸಿ 8 ಮಂದಿ ಸಾವನಪ್ಪಿದ್ದಾರೆ.