ಕುಕ್ಕೆ ಕ್ಷೇತ್ರದಲ್ಲಿ ಬರೋಬ್ಬರಿ ₹146.01 ಕೋಟಿ ಆದಾಯ: ರಾಜ್ಯದಲ್ಲೇ ಅಗ್ರಸ್ಥಾನ

Sampriya

ಭಾನುವಾರ, 7 ಏಪ್ರಿಲ್ 2024 (10:07 IST)
Photo Courtesy X
ಮಂಗಳೂರು: ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2023-24ನೇ ಆರ್ಥಿಕ ವರ್ಷದಲ್ಲಿ ₹146.01 ಕೋಟಿ ಆದಾಯ ಗಳಿಸಿದೆ.
ಈ ಮೂಲಕ ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದ ಮೊದಲ ದೇವಸ್ಥಾನವಾಗಿದೆ. ಕಳೆದ ವರ್ಷ ದೇವಳವು ₹ 123 ಕೋಟಿ ಆದಾಯ ಗಳಿಸಿತ್ತು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಗುತ್ತಿಗೆ, ತೋಟದ ಉತ್ಪನ್ನ, ಕಟ್ಟಡ ಬಾಡಿಗೆ, ಕಾಣಿಕೆ, ಕಾಣಿಕೆ ಹುಂಡಿ, ಹರಕೆ ಸೇವೆ, ಅನುದಾನ, ಶಾಶ್ವತ ಸೇವೆಗಳಿಂದ ಆದಾಯ ಬರುತ್ತಿದೆ. ದೇವಳದ ಆದಾಯದ ಲೆಕ್ಕಾಚಾರ ಈಗಾಗಲೇ ಮುಗಿದಿದೆ. ಸೇವೆ, ಕಾಣಿಕೆ ಮೊದಲಾದುವುಗಳಿಂದ ಬಂದ ಆದಾಯದ ವಿಭಜನೆ ನಡೆಯುತ್ತಿದ್ದು, ಈ ಲೆಕ್ಕಾಚಾರ ಇನ್ನೆರಡು ದಿನಗಳಲ್ಲಿ ಸಿಗಲಿದೆ ಎಂದು ಮುಜರಾಯಿ ಆಯುಕ್ತರು ತಿಳಿಸಿದ್ದಾರೆ.

2006-07ರಲ್ಲಿ ದೇವಳದ ಆದಾಯವು ₹ 19.76 ಕೋಟಿ ಆಗಿತ್ತು. 2007-08ರಲ್ಲಿ ₹ 24.44 ಕೋಟಿಗೆ ಹೆಚ್ಚಾಗಿ ರಾಜ್ಯದ ಶ್ರೀಮಂತ ದೇವಾಲಯವಾಗಿ ಗುರುತಿಸಿಕೊಂಡಿತ್ತು. 2008-09ರಲ್ಲಿ ₹ 31 ಕೋಟಿ, 2009-10ರಲ್ಲಿ ₹ 38.51 ಕೋಟಿ, 2011-12ರಲ್ಲಿ ₹ 56.24 ಕೋಟಿ, 2012-13ರಲ್ಲಿ ₹ 66.76 ಕೋಟಿ, 2013-14ರಲ್ಲಿ ₹ 68 ಕೋಟಿ, 2014-15ರಲ್ಲಿ ₹ 77.60 ಕೋಟಿ, 2015-16ರಲ್ಲಿ ₹ 88.83 ಕೋಟಿ 2016-17ರಲ್ಲಿ ₹ 89.65 ಕೋಟಿ, 2017-18ರಲ್ಲಿ ₹ 95.92 ಕೋಟಿ, 2018-19ರಲ್ಲಿ ₹ 92.09 ಕೋಟಿ, 2019-20ರಲ್ಲಿ ₹ 98.92 ಕೋಟಿ, 2020-21ರಲ್ಲಿ ₹ 68.94 ಕೋಟಿ, 2021-22ರಲ್ಲಿ ₹ 72.73 ಕೋಟಿ, 2022-23ನೇ ಸಾಲಿನಲ್ಲಿ ₹ 123 ಕೋಟಿ ಆದಾಯ ಗಳಿಸಿತ್ತು.

ಮುಜರಾಯಿ ಇಲಾಖೆ ವ್ಯಾಪ್ತಿಯ ಕೊಲ್ಲೂರು ಮೂಕಾಂಬಿಕಾ ದೇವಳ ₹ 68.23 ಕೋಟಿ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ₹ 30.73 ಕೋಟಿ, ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ₹ 25.80 ಕೋಟಿ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ ₹ 15.27 ಕೋಟಿ, ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿ ದೇವಸ್ಥಾನ ₹ 16.29 ಕೋಟಿ, ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ₹ 13.65 ಕೋಟಿ, ಬೆಂಗಳೂರಿನ ಬನಶಂಕರಿ ದೇವಸ್ಥಾನ ₹ 11.37 ಕೋಟಿ ಆದಾಯ ಗಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ