ಭಾರತದ ಸಂಪ್ರದಾಯದಲ್ಲಿ ವಿವಾಹ ಎನ್ನುವುದು ಒಂದು ಪವಿತ್ರ ಬಂಧವಾಗಿದೆ. ಇದು ಗಂಡು ಮತ್ತು ಹೆಣ್ಣಿನ ನಡುವೆ ಒಂದು ಬಿಡಿಸಲಾಗದ ಬೆಸುಗೆ ಹಾಕುವ ಪ್ರಕ್ರಿಯೆ ಎಂದರೆ ತಪ್ಪಾಗಲಾರದು. ವಿವಾಹವಾದ ಜೋಡಿಗಳು ಒಬ್ಬರನ್ನು ಒಬ್ಬರು ಅರಿಯುವುದು ತುಂಬಾನೇ ಮುಖ್ಯ. ಅದರಲ್ಲೂ ಇತ್ತೀಚಿನ ಯುವ ಪೀಳಿಗೆಯವರು ಒಬ್ಬರನ್ನು ಒಬ್ಬರು ಚೆನ್ನಾಗಿ ಅರಿಯುವುದಕ್ಕಾಗಿ ಈ ಹನಿಮೂನ್‌ಗೆ ಹೋಗುವುದನ್ನು ನಾವು ಹೆಚ್ಚಾಗಿ ಕಾಣಬಹುದು.
ಹೌದು ಹೊಸದಾಗಿ ವಿವಾಹ ಬಂಧನಕ್ಕೆ ಒಳಪಟ್ಟಿರುವ ಜೋಡಿಗಳು ತಮ್ಮನ್ನು ತಾವು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತವೆ, ತಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ತುಡಿಯುತ್ತವೆ. ಅದಕ್ಕಾಗಿಯೇ ಸುಂದರವಾದ, ಏಕಾಂತವಾದ ಜಾಗಗಳಿಗಾಗಿ ಹುಡುಕಾಡುವುದು ಉಂಟು, ಅದರಲ್ಲೂ ತಮ್ಮ ಮಧುಚಂದ್ರವನ್ನು ಅದ್ಭುತವಾಗಿ ಕಳೆಯುವುದರೊಂದಿಗೆ ಅದನ್ನು ಒಂದು ಅವಿಸ್ಮರಣಿಯ ನೆನಪಾಗಿ ಇಡಬೇಕು ಎಂದು ಪ್ರತಿಯೊಬ್ಬ ನವಜೋಡಿಗಳು ಬಯಸುತ್ತಾರೆ. ಅಲ್ಲದೇ ಮಧುಚಂದ್ರ ಎನ್ನುವುದು ದೀರ್ಘಕಾಲದ ದಾಂಪತ್ಯಕ್ಕೆ ಹಾಕುವ ಮೊದಲ ಅಡಿಪಾಯವಾಗಿರುವುದರಿಂದ ಅದನ್ನು ರೋಮಾಂಚನಕಾರಿಯಾಗಿ ಕಳಿಯಬೇಕು ಎಂದು ಬಯಸುವವರು ನಮ್ಮಲ್ಲಿ ಹೆಚ್ಚು ಎಂದೇ ಹೇಳಬಹುದು. ಅದಕ್ಕಾಗಿ ಕೆಲವರು ಯಾವುದೇ ಜಂಜಾಟಗಳಿಲ್ಲದೇ ಹಿತಕರವಾದ ವಾತಾವರಣದಿಂದ ಕೂಡಿರುವ ಪ್ರಕೃತಿ ಸೌಂದರ್ಯದಿಂದ ತುಂಬಿ ತುಳುಕುತ್ತಿರುವ ಸ್ಥಳಗಳನ್ನು ಹುಡುಕುತ್ತಾರೆ, ಕೆಲವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದೇಶಕ್ಕೆ ಪ್ರಯಾಣಿಸಿದರೆ ಇನ್ನೂ ಕೆಲವರು ಭಾರತದಲ್ಲಿಯೇ ಉತ್ತಮವಾದ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಹನಿಮೂನ್ ಅನ್ನು ಪೂರ್ಣಗೊಳಿಸುತ್ತಾರೆ. ಒಂದು ವೇಳೆ ನೀವು ಸಹ ನವಜೋಡಿಗಳಾಗಿದ್ದಲ್ಲಿ ಹನಿಮೂನ್ ಹೋಗಲು ಬಯಸಿದರೆ ಕಡಿಮೆ ಖರ್ಚಿನಲ್ಲಿ ಉತ್ತಮ ಸ್ಥಳಗಳನ್ನು ನಾವು ತಿಳಿಸುತ್ತೇವೆ ಅದೂ ಭಾರತದಲ್ಲಿಯೇ, ಅದ್ಯಾವುದು ಎಂಬ ಕೂತುಹಲ ನಿಮಗಿದ್ರೆ ಈ ಲೇಖನವನ್ನು ಓದಿ.
ಶ್ರೀನಗರ
ಕಣ್ಣು ಕೋರೈಸುವ ಚೆಲುವು, ತಣ್ಣನೆಯ ಗಾಳಿಯ ಸ್ಪರ್ಶ, ಬೆಚ್ಚನೆಯ ಪಿಸುಮಾತು ಈ ರಸವತ್ತಾದ ಸಮಯವಿದೆಯಲ್ಲಾ ಅದುವೇ ಸ್ವರ್ಗ ಅಂತಹ ಸ್ವರ್ಗದ ಚೆಲುವನ್ನು ಸವಿಯಬೇಕು ಎಂದರೆ ನೀವು ಕಾಶ್ಮೀರದ ರಾಜಧಾನಿಯಾದ ಶ್ರೀನಗರಕ್ಕೆ ಬರಬೇಕು. ಇದು ಹನಿಮೂನ್‌ಗೆ ಹೇಳಿ ಮಾಡಿಸಿದ ತಾಣವಾಗಿದ್ದು ನಿಮಗೆ ಹೊಸ ಲೋಕದಲ್ಲಿರುವಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲ ಇಲ್ಲಿರುವ ಸೌಂದರ್ಯರಾಶಿ ಹಾಗೂ ತಂಪಾದ ವಾತವರಣ ನಿಮ್ಮ ಸಂಬಂಧವನ್ನು ಇನ್ನಷ್ಟು ಹತ್ತಿರಗೊಳಿಸುತ್ತದೆ. ಅಷ್ಟೇ ಅಲ್ಲ ಶ್ರೀನಗರದ ಸುತ್ತಮುತ್ತ ತುಂಬಾ ರೋಮಾಂಚನಕಾರಿಯಾಗಿರುವ ಸ್ಥಳಗಳನ್ನು ನೀವು ಕಾಣಬಹುದಾಗಿದೆ. ಅದಾವುದೆಂದರೆ ಶಂಕರಾಚಾರ್ಯ ಹಿಲ್, ಯೂಸ್ಮಾರ್ಗ್, ಡಾಲ್ ಲೇಕ್, ನಿಗೆನ್ ಸರೋವರ, ಸಿಂಥಾನ್ ಟಾಪ್ಐಸ್. ಈ ಸ್ಥಳಗಳು ನಿಮ್ಮ ಹನಿಮೂನ್ ಪ್ರವಾಸಕ್ಕೆ ಇನ್ನಷ್ಟು ಮೆರಗು ನೀಡಲಿದ್ದು ನಿಮ್ಮ ಹನಿಮೂನ್ ಅನ್ನು ಇವು ಇನ್ನಷ್ಟು ಅದ್ಭುತವಾಗಿಸುತ್ತವೆ.
ಅಲ್ಲದೇ ನೀವು ಇಲ್ಲಿ ಏರೋ ಬಲೂನ್, ಸ್ಕೇಟಿಂಗ್‌ನಂತಹ ಚಟುವಟಿಕೆಗಳನ್ನು ಮಾಡಬಹುದಾಗಿದೆ, ಅಲ್ಲದೇ ಇಲ್ಲಿನ ಕೆಲವು ಹೊಟೇಲ್‌ಗಳು ಹನಿಮೂನ್ ಪ್ಯಾಕೇಜ್ ಅನ್ನು ರಿಯಾಯಿತಿ ದರದಲ್ಲಿ ನೀಡುತ್ತದೆ. ಇಲ್ಲಿ ದೋಣಿಮನೆಗಳು ಲಭ್ಯವಿದ್ದು, ನಿಮ್ಮ ಮಧುಚಂದ್ರವನ್ನು ಅದ್ಭುತವಾಗಿ ಕಳೆಯಬಹುದಾಗಿದೆ. ಇಲ್ಲಿ ನೀವು ಭೇಟಿ ನೀಡಲು ಎಪ್ರಿಲ್ - ಅಕ್ಟೋಬರ್ ಉತ್ತಮ ಸಮಯವಾಗಿದೆ.
ಶಿಮ್ಲಾ
ಹಿಮಾಚಲ್ ಪ್ರದೇಶದ ರಾಜಧಾನಿಯಾಗಿರುವ ಶಿಮ್ಲಾ ಸಮುದ್ರ ಮಟ್ಟದಿಂದ 7000 ಅಡಿಗಿಂತಲೂ ಎತ್ತರದಲ್ಲಿದ್ದು, ಮಧುಚಂದ್ರಕ್ಕೆ ಹೇಳಿಮಾಡಿಸಿದ ತಾಣವಾಗಿದೆ. ಶಿಮ್ಲಾ ಸುತ್ತಲೂ ಹಿಮದಿಂದ ಕೂಡಿದ ಅನೇಕ ಶಿಖರಗಳಿದ್ದು ಅಲ್ಲಲ್ಲಿ ಹಸಿರಿನ ಹೊದಿಕೆಯನ್ನು ಹೊತ್ತ ಪರ್ವತಗಳ ಸಾಲುಗಳು ಎಂತಹವರಿಗಾದರೂ ಮನ ತಣಿಸದೇ ಇರಲಾರದು. ಅಲ್ಲದೇ ಇಲ್ಲಿನ ಕೊರೆಯುವ ಚಳಿ ನಿಮ್ಮ ಹನಿಮೂನ್ ಪ್ರವಾಸದ ಹುಮ್ಮಸ್ಸನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ. ಅಷ್ಟೇ ಅಲ್ಲ ಇಲ್ಲಿರುವ ಬ್ರಿಟಿಷರ ಕಾಲದ ಮನೆಗಳು, ಶಾಪಿಂಗ್ ತಾಣಗಳು, ಪ್ರಖ್ಯಾತವಾದ ದೇವಸ್ಥಾನಗಳು, ಹಳೇ ಕಾಲದ ಚರ್ಚುಗಳು ನಿಮ್ಮ ಹನಿಮೂನ್ ಪ್ರವಾಸವನ್ನು ನೆನಪಿನಲ್ಲಿಡುವಂತೆ ಮಾಡುತ್ತದೆ. ಸುಂದರ ಪ್ರಕೃತಿಯ ನಡುವೆ ಕೊರೆಯುವ ಚಳಿಯಲ್ಲಿ ಸಂಗಾತಿಯೊಂದಿಗೆ ಏಕಾಂತವಾಗಿ ಕಳೆಯಬೇಕು ಎಂದು ನೀವು ಬಯಸಿದರೆ, ನೀವು ಇಲ್ಲಿಗೆ ಭೇಟಿ ನೀಡಲು ಯೋಜನೆ ರೂಪಿಸಬಹುದು.
ಇದಲ್ಲದೇ ನೀವು ಇಲ್ಲಿ ಸ್ಕೇಟಿಂಗ್, ಸೈಟ್‌ಸಿಯಿಂಗ್ ಹಾಗೂ ಇನ್ನಿತರ ಹೊರಾಂಗಣ ಚಟುವಟಿಕೆಗಳಿದ್ದು ನೀವು ಅದನ್ನು ಆನಂದಿಸಬಹುದಾಗಿದೆ, ಇಲ್ಲಿನ ರುಚಿಕರ ಊಟಗಳು ನಿಮ್ಮನ್ನು ಮನಸೋಲುವಂತೆ ಮಾಡುತ್ತದೆ. ಅಲ್ಲದೇ ಇಲ್ಲಿನ ಕೆಲವು ಹೊಟೇಲ್‌ಗಳು ಹನಿಮೂನ್ ಪ್ಯಾಕೇಜ್ ಅನ್ನು ರಿಯಾಯಿತಿ ದರದಲ್ಲಿ ನೀಡುವುದರೊಂದಿಗೆ ನಿಮ್ಮ ಪೂರ್ಣ ಪ್ರಮಾಣದ ಶಿಮ್ಲಾ ಪ್ರವಾಸಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವ ಏಜನ್ಸಿಗಳನ್ನು ನೀವು ಇಲ್ಲಿ ಕಾಣಬಹುದು. ಮಾರ್ಚ್ - ಜೂನ್ ಶಿಮ್ಲಾಗೆ ಭೇಟಿ ನೀಡಲು ಉತ್ತಮವಾದ ಸಮಯವಾಗಿದೆ.
ಊಟಿ
ನೀಲಗಿರಿ ಬೆಟ್ಟಗಳ ನಡುವೆ ವಿಶಾಲವಾಗಿ ಕಂಡುಬರುವ ಊಟಿ ಭೂ ಲೋಕದ ಸ್ವರ್ಗವೆಂದರೆ ತಪ್ಪಾಗಲಾರದು, ಇದನ್ನು ಬ್ಲೂ ಮೌಂಟೆನ್ ಅಂತಲೂ ಕರೆಯುತ್ತಾರೆ. ಇಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತ ನೀಲಗಿರಿ ಮರಗಳು ಊಟಿಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ, ಇಲ್ಲಿರುವ ಅಪರೂಪದ ಹೂಗಳ ರಾಶಿಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಮುಂಜಾನೆ ಮಂಜಿನಲ್ಲಿ ಊಟಿಯನ್ನು ಸುತ್ತುವುದೇ ಒಂದು ಸೊಬಗು, ಅಷ್ಟೇ ಅಲ್ಲ, ಊಟಿಯ ಕಣಿವೆಗಳಲ್ಲಿ ಪ್ರತಿ 12 ವರ್ಷಕ್ಕೆ ಒಮ್ಮೆ ಬಿಡುವ ಕುರುಂಜಿ ಪುಷ್ಪಗಳಿಂದ ಇಲ್ಲಿನ ಕಣಿವೆ ಪ್ರದೇಶವೆಲ್ಲವೂ ನೀಲಿಯಾಗಿ ಕಾಣುತ್ತದೆ. ಈ ಊಟಿಯ ಸೊಬಗನ್ನು ನೋಡಲೆಂದೇ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
ಇದಲ್ಲದೇ ಊಟಿಯಲ್ಲಿ ಹಲವಾರು ಆಕರ್ಷಣಿಯ ಸ್ಥಳಗಳಿದ್ದು ಇಲ್ಲಿಗೆ ಬರುವ ಪ್ರವಾಸಿಗರಿಗೆ ನಿರಾಸೆಯನ್ನು ಉಂಟುಮಾಡಿರುವ ಉದಾಹರಣೆಗಳೇ ಇಲ್ಲ. ಇಲ್ಲಿರುವ ಬೊಟಾನಿಕಲ್ ಗಾರ್ಡನ್, ರೋಸ್ ಗಾರ್ಡನ್, ಊಟಿ ಲೇಕ್, ದೊಡ್ಡಬೆಟ್ಟದ ಪಿಕ್, ನಿಮ್ಮ ಹನಿಮೂನ್ ಪ್ರವಾಸವನ್ನು ಉಲ್ಲಾಸಭರಿತವಾಗಿಸುತ್ತವೆ. ಅಷ್ಟೇ ಅಲ್ಲ ಮುಂಜಾನೆ ಜಿನುಗೋ ಮಂಜಿನ ಹನಿಯ ನಡುವೆ ಸಣ್ಣಗೆ ನಡಗುತ್ತಾ ಸಂಗಾತಿಯೊಡನೆ ಸುತ್ತಾಡಲು ಈ ಸ್ಥಳ ಉತ್ತಮವಾಗಿದ್ದು, ಇಲ್ಲಿನ ತರಹೇವಾರು ಚಾಕಲೇಟ್‌ಗಳು ನಿಮ್ಮ ಸಂಗಾತಿಯನ್ನು ಸೆಳೆಯದೇ ಇರಲಾರದು.
ಕೇರಳ - ಬ್ಯಾಕ್‌ವಾಟರ್
ದೇವರ ನಾಡು ಎಂದೇ ಪ್ರಖ್ಯಾತಗೊಂಡಿರುವ ಕೇರಳ ತನ್ನ ವಿಶೇಷವಾದ ಸಂಸ್ಕೃತಿ ಸಂಪ್ರದಾಯಗಳ ನಡುವೆ ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ಹನಿಮೂನ್ ಪ್ರವಾಸಿಗರಿಗೆಂದೇ ವಿಶೇಷವಾದ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಪ್ರಕೃತಿಯ ಸೊಬಗನ್ನು ಸವಿಯುವುದರೊಂದಿಗೆ ಇಲ್ಲಿನ ಶೈಲಿಯ ಉತ್ತಮವಾದ ಆಹಾರಗಳು ನಿಮ್ಮ ಪ್ರವಾಸಕ್ಕೆ ಇಂಬು ಕೊಡುವುದರಲ್ಲಿ ಎರಡು ಮಾತಿಲ್ಲ.
ಅಲ್ಲದೇ, ಇಲ್ಲಿ ಆಗಮಿಸುವ ನವ ಜೋಡಿಗಳಿಗೆ ಸಾಂಪ್ರದಾಯಿಕ ರೀತಿಯಲ್ಲಿ ಉಪಚಾರ ಮಾಡುವುದು ಇಲ್ಲಿನ ವಿಶೇಷವಾಗಿದೆ, ಅಲ್ಲದೇ ನದಿಯ ಹಿನ್ನಿರಿನಲ್ಲಿ ಬೋಟುಮನೆಗಳನ್ನು ಲಂಗರು ಹಾಕಿ ಜೋಡಿಗಳಿಗೆ ಬಾಡಿಗೆ ನೀಡಿ ಅಲ್ಲಿಯೇ ಮಧುಚಂದ್ರಕ್ಕೆ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಜುಳು ಜುಳು ಹರಿಯುವ ನದಿಯ ಹಿನ್ನಿರಿನ ಶಬ್ದದ ನಡುವೆ ತಂಪಾದ ಗಾಳಿಯನ್ನು ಬರಸೆಳೆದು ಸಂಗಾತಿಯೊಡನೆ ಏಕಾಂತವಾಗಿ ವಿಹರಿಸುವ ಸಲುವಾಗಿಯೇ ಹೊಸ ಬಾಳಿಗೆ ಕಾಲಿರಿಸುವ ಅನೇಕ ಜೋಡಿಗಳು ಕೇರಳವನ್ನು ಆಯ್ಕೆಮಾಡಿಕೊಳ್ಳುತ್ತಾರೆ.
ಅಷ್ಟೇ ಅಲ್ಲ ಇಲ್ಲಿನ ಕಲೆಯಾದ ಭರತನಾಟ್ಯ, ಕಥಕ್ಕಳಿ, ಮೋಹಿನಿಅಟ್ಟಂ ಪ್ರಮುಖ ಆಕರ್ಷಣೆಯಾಗಿದ್ದು, ಇಲ್ಲಿನ ನಾನ್‌ವೆಜ್ ಊಟಗಳು, ಹಳೆಯ ಕಾಲದ ದೇವಸ್ಥಾನಗಳೆಲ್ಲವೂ ಇಲ್ಲಿಗೆ ಬರುವ ಜೋಡಿಗಳ ಪ್ರವಾಸವನ್ನು ಆನಂದಮಯವಾಗಿಸುತ್ತದೆ. ಇಲ್ಲಿ ಉತ್ತಮವಾದ ಸೈಟ್‌ಸೀನ್‌ಗಳನ್ನು ನೀವು ನೋಡಬಹುದಾಗಿದೆ. ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಜುನ್ - ಅಗಸ್ಟ್ ಆಗಿದೆ.
ಕೂರ್ಗ್
ದಕ್ಷಿಣ ಭಾರತದ ಕೂರ್ಗ್ ಅನ್ನು ಭಾರತದ ಸ್ಕಾಟ್‌ಲ್ಯಾಂಡ್ ಎಂತಲೂ ಕರೆಯುತ್ತಾರೆ, ಇದೊಂದು ಚಿಕ್ಕದಾದ ಪಟ್ಟಣವಾಗಿದ್ದು, ಕಡಿಮೆ ಖರ್ಚಿನಲ್ಲಿ ಮಧುಚಂದ್ರವನ್ನು ಪೂರ್ಣಗೊಳಿಸುವ ಯೋಜನೆ ನಿಮಗೆ ಇದ್ದಲ್ಲಿ ಇದು ಉತ್ತಮ ಸ್ಥಳವಾಗಿದೆ. ಈ ಚಿಕ್ಕ ಪಟ್ಟಣ ತುಂಬಾ ಸುಂದರವಾಗಿದ್ದು ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತದೆ, ಈ ಪ್ರದೇಶದಲ್ಲಿ ಹಲವಾರು ಟ್ರಕ್ಕಿಂಗ್ ಸ್ಥಳಗಳಿದ್ದು, ಜಲಪಾತದ ಮಜವನ್ನು ಪಡೆಯಬಹುದಾಗಿದೆ. ಈ ಸ್ಥಳವು ಏಕಾಂತ ಪ್ರಿಯರಿಗೆ ಉತ್ತಮವಾಗಿದ್ದು ಸಂಜೆಯ ಹೊತ್ತು ಇಲ್ಲಿ ಸಿಗುವ ಕಾಫಿಯನ್ನು ಹಿರುತ್ತಾ ವಿಹರಿಸುವ ಮಜವೇ ಬೇರೆ. ಇಲ್ಲಿ ಹೆಚ್ಚಾಗಿ ಕಂಡುಬರುವ ಕಿತ್ತಳೆ ಹಣ್ಣಿನ ತೋಟಗಳು, ಕಾಫಿ ತೋಟಗಳು ಪ್ರವಾಸಿಗರ ಕಣ್ಮನ ಸೆಳೆಯುವುದರಲ್ಲಿ ಸಂಶಯವೇ ಇಲ್ಲಾ.
ಇಲ್ಲಿ ಮುಂಜಾನೆಯಲ್ಲಿ ಕಾಣಸಿಗುವ ಮಂಜು ಮತ್ತು ಕತ್ತಲಾಗುತ್ತಿದ್ದಂತೆ ಅನುಭವವಾಗುವ ಚಳಿ ಇವೆರಡರ ಮಧ್ಯೆ ಕಣ್ಮನ ಸೆಳೆಯುವ ಪ್ರಕೃತಿಯ ಸೊಬಗು ಇವೆಲ್ಲವೂ ನಿಮ್ಮ ಹನಿಮೂನ್ ಪ್ರವಾಸವನ್ನು ಉತ್ತವಾಗಿಸುತ್ತದೆ. ಇದಲ್ಲದೇ ಕೂರ್ಗ್ ಸುತ್ತಮುತ್ತಲೂ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು, ಇಲ್ಲಿಗೆ ಭೇಟಿ ನೀಡಲು ಮಾರ್ಚ್ - ಜನೆವರಿ ಉತ್ತಮ ಸಮಯವಾಗಿದೆ.
ಗೋವಾ
ಬೀಚುಗಳು ಮತ್ತು ಚರ್ಚುಗಳ ನಗರಿ ಗೋವಾ ಕೂಡಾ ಹನಿಮೂನ್ ಪ್ರವಾಸಕ್ಕೆ ಉತ್ತಮವಾಗಿದ್ದು, ಇಳಿಸಂಜೆಯಲ್ಲಿ ಕಡಲು ದಂಡೆಯ ಮೇಲೆ ಸಂಗಾತಿಯೊಡನೆ ಏಕಾಂತವಾಗಿ ವಿಹರಿಸಲು ಇದು ಉತ್ತಮ ಸ್ಥಳವಾಗಿದೆ. ಅಲ್ಲದೇ ಇಲ್ಲಿನ ಬೀಚುಗಳಲ್ಲಿ ನವ ವಿವಾಹಿತರಿಗಾಗಿಯೇ ಏರ್ಪಡಿಸುವ ಕೆಲವು ಕಾರ್ಯಕ್ರಮಗಳು ಜೋಡಿಗಳನ್ನು ಇಲ್ಲಿಗೆ ಬರುವಂತೆ ಆಕರ್ಷಿಸುತ್ತದೆ. ಪ್ರಪಂಚದಾದ್ಯಂತ ತನ್ನ ವಿಭಿನ್ನ ಸಂಸ್ಕೃತಿಗಳಿಂದಲೇ ಗುರುತಿಸಿಕೊಂಡಿರುವ ಗೋವಾ ಮಧುಚಂದ್ರಕ್ಕೆ ಉತ್ತಮ ಸ್ಥಳವೆಂಬುದರಲ್ಲಿ ಎರಡು ಮಾತಿಲ್ಲ, ಇಲ್ಲಿನ ಬೀಚುಗಳು, ಚರ್ಚ್‌ಗಳು ಪ್ರಮುಖ ಆಕರ್ಷಣೆಯಾಗಿದ್ದು, ನೀವು ಶಾಂಪಿಂಗ್ ಪ್ರಿಯರಾಗಿದ್ದಲ್ಲಿ ಇಲ್ಲಿರುವ ಹಲವಾರು ಶಾಪಿಂಗ್ ಮಾಲ್‌ಗಳು ಮತ್ತು ಸ್ಥಳೀಯ ಮಾರುಕಟ್ಟೆಗಳು ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಇಲ್ಲಿ ಸಾಧ್ಯವಾಗುತ್ತದೆ. ಇಲ್ಲಿನ ವಿಶೇಷವಾದ ನಾನ್ ವೆಜ್ ಶೈಲಿಯ ತಿನಿಸುಗಳು ಮತ್ತು ವಿದೇಶದ ಮಧ್ಯಗಳಿಂದ ಹಿಡಿದು ದೇಸಿ ಸರಾಯಿಯವರೆಗೂ ಇಲ್ಲಿ ಎಲ್ಲವೂ ಲಭ್ಯವಿದೆ. ಅಷ್ಟೇ ಅಲ್ಲ ಇಲ್ಲಿ ಹೆಚ್ಚಾಗಿ ಪಬ್ ಮತ್ತು ಡಿಸ್ಕೋಗಳಿದ್ದು ಅದರ ಮಜವನ್ನು ನೀವು ಪಡೆಯಬಹುದಾಗಿದೆ ಅಲ್ಲದೇ ನೀವು ಕೆಸಿನೋ ಪ್ರಿಯರಾಗಿದ್ದಲ್ಲಿ ಅದಕ್ಕೂ ಇಲ್ಲಿ ಅವಕಾಶವಿದೆ.
ಅಲ್ಲದೇ ಇಲ್ಲಿನ ಬೀಚುಗಳಲ್ಲಿ ಸಾಹಸ ಕ್ರೀಡೆಗಳು ಮತ್ತು ವಾಟರ್ ಸ್ಪೋರ್ಟ್ಸ್‌ಗಳನ್ನು ಸಹ ಆಯೋಜಿಸಲಾಗುತ್ತಿದ್ದು ಅದರ ಮಜವನ್ನು ಪಡೆಯಬಹುದಾಗಿದೆ ಒಟ್ಟಿನಲ್ಲಿ ಕಡಿಮೆ ಸಮಯ ಮತ್ತು ಖರ್ಚಿನಲ್ಲಿ ನಿಮ್ಮ ಮಧುಚಂದ್ರವನ್ನು ಪರಿಪೂರ್ಣವಾಗಿಸಬೇಕು ಎಂದುಕೊಂಡರೆ ಗೋವಾ ಉತ್ತಮ ಆಯ್ಕೆಯಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.