ಮೂವತ್ಮೂರು ಕೋಟಿ ದೇವತೆಗಳಿಗೂ ಮೊದಲು ಸಲ್ಲುವ ಪೂಜೆ ಗಣಪತಿಗೆ

ಶುಕ್ರವಾರ, 14 ಸೆಪ್ಟಂಬರ್ 2018 (14:04 IST)
ಗಣಪತಿ ಎನ್ನುವ ಪದದ ಮೂಲ ಅರ್ಥವೇ ಗಣಗಳ ನಾಯಕ, ಗಣಗಳ ಒಡೆಯ ಎಂದು. ಪುರಾಣ ಕಾಲದಿಂದಲೂ ಮೂವತ್ಮೂರು ಕೋಟಿ ದೇವತೆಗಳಿಗೂ ಮೊದಲು ಸಲ್ಲುವ ಪೂಜೆ ಗಣಪತಿಗೆ. ಸರ್ವ ಧರ್ಮದವರಿಂದಲೂ ಸರ್ವ ಜನಾಂಗಗಳಿಂದಲೂ ಪೂಜಿಸಲ್ಪಡುವ ಏಕೈಕ ದೈವವೇ ವಿನಾಯಕ.

ಆದುದರಿಂದಲೇ ಈತನಿಲ್ಲದ ದೇಗುಲವಿಲ್ಲ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಈತ ವಿನಾಯಕ, ಗಜಾನನ, ಗಣಪತಿ, ಏಕದಂತ, ಗಣೇಶ, ಮಂಗಳಮೂರ್ತಿ, ವಕ್ರತುಂಡ, ಸಿದ್ಧಿವಿನಾಯಕ, ಹೇರಂಭ, ಲಂಬೋದರ, ಮೂಷಿಕವಾಹನ, ಬಾಲಚಂದ್ರ, ಗಣನಾಯಕ, ವಿಘ್ನ ವಿನಾಶಕ, ವಿಘ್ನೇಶ್ವರ, ಗಜಕರ್ಣ, ಗಜಾಧ್ಯಕ್ಷ ಹೀಗೆ ಒಂದೇ ಎರಡೇ ಸಹಸ್ರಾರು ಹೆಸರುಗಳಿಂದ ಕರೆಯಲ್ಪಡುತ್ತಾನೆ. 
 
ಆನೆಯ ಮೊಗವನ್ನು ಹೊಂದಿದ್ದರೂ ವಿಶೇಷವಾದ ಶಕ್ತಿ,  ಸ್ಥೂಲ ಕಾಯವಿದ್ದರೂ ಸೂಕ್ಷ್ಮದೃಷ್ಟಿಯನ್ನು ಹೊಂದಿರುವ ಗಣಪತಿಯ ವರ್ಣನೆ ಅಸಾಧ್ಯವಾದುದು. ಮಹಾರಾಷ್ಟ್ರ, ಮುಂಬೈಯಂತಹ ನಗರಗಳಲ್ಲಿ ಗಣೇಶ ಚತುರ್ಥಿಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಅಂತೆಯೇ ಮಹಾರಾಷ್ಟ್ರದಲ್ಲಿರುವ ಅಷ್ಟ ವಿನಾಯಕನ ದೇಗುಲಗಳ ಬಗ್ಗೆ ತಿಳಿಯೋಣ.
 
ಮಹಾರಾಷ್ಟ್ರದಲ್ಲಿ ಗಣೇಶನಿಗೆ ಅರ್ಪಿತವಾದ 8 ಕ್ಷೇತ್ರಗಳು ಪುರಾತನವಾದ ದೇವಾಲಯಗಳನ್ನು ಹೊಂದಿದೆ. ಇವುಗಳನ್ನು ಮಾಧವರಾವ್ ಪೇಷ್ಟೆಯವರ ಕಾಲದಲ್ಲಿ ಜೀರ್ಣೋದ್ಧಾರ ಮಾಡಿ ಪುನರ್‌ನಿರ್ಮಾಣ ಮಾಡಲಾಗಿದೆ. 
 
1. ಮೋರೆಗಾಂವ್‌ನ ಮಯೂರೇಶ್ವರ್
 
ಪುಣೆ ಜಿಲ್ಲೆಯ ಬಾರಾಮತಿ ತಾಲೂಕಿನ ಕೃಷ್ಣಾ ನದಿಯ ದಂಡೆಯಲ್ಲಿರುವ ಈ ದೇಗುಲವು ಬಹುಮನಿ ಸುಲ್ತಾನರ ಕಾಲದ ದೇಗುಲ. ದೇಗುಲದ ಹೊರಗೋಡೆಯ ಎತ್ತರವೇ ಸುಮಾರು 50 ಅಡಿಯಷ್ಟಿದ್ದು, ದೇಗುಲವನ್ನು ಪ್ರವೇಶಿಸಿದಾಗ ನಂದಿ ವಿಗ್ರಹವು ಕೈ ಬೀಸಿ ಕರೆಯುತ್ತದೆ. ಎದುರಿಗಿರುವ ನಂದಿ ವಿಗ್ರಹಕ್ಕೆ ಐತಿಹ್ಯವಿಲ್ಲದಿದ್ದರೂ ಇದೇ ಸ್ಥಳದಲ್ಲಿ ಗಣಪತಿ ಸಿಂಧೂರಾಸುರನನ್ನು ಸಂಹರಿಸಿದ ಎಂಬ ಪ್ರತೀತಿ ಇದೆ. ಈ ದೇವಾಲಯದಲ್ಲಿ ಗಣಪತಿಯ ಸೊಂಡಿಲು ಎಡಭಾಗಕ್ಕೆ ತಿರುಗಿದ್ದು ಅದರ ಮೇಲ್ಬದಿಯಲ್ಲಿ ಸರ್ಪವು ರಕ್ಷಣೆ ನೀಡುತ್ತಿರುವಂತೆ ತೋರುತ್ತದೆ. ಇದರೊಂದಿಗೆ ಸಿದ್ಧಿ (ಆಧ್ಯಾತ್ಮಿಕ ಶಕ್ತಿ) ಮತ್ತು ರಿದ್ದಿ (ಶ್ರೇಯಸ್ಸು) ಯರ ಸನ್ನಿಧಾನವಿದೆ. 
 
2. ಥೆವೋರ್‌ನ ಶ್ರೀ ಚಿಂತಾಮಣಿ
 
ಪುಣೆ ಜಿಲ್ಲೆಯ ಹವೇಲಿ ತಾಲೂಕಿನಲ್ಲಿರುವ ಈ ಕ್ಷೇತ್ರವು ಶ್ರೀ ಮೊರೆಯ ಗೋಸಾವಿ ಅವರ ವಂಶಸ್ಥರಾದ ಧರಣೀಧರ್ ಮಹಾರಾಜ್ ದೇವ್ ಎಂಬುವವರು ಕಟ್ಟಿಸಿರುವ ಊಹಾಪೋಹವಿದೆ. ಮತ್ತು ಈ ದೇಗುಲವು ಮರಾಠ ದೊರೆಗಳಲ್ಲಿಯೇ ಪ್ರಸಿದ್ಧನಾದ ಮಾದವರಾವ್ ಪೇಶ್ವೆಯ ಮನೆದೈವವಾಗಿತ್ತು ಎಂದು ಹೇಳಬಹುದು. ತ್ರೇತಾಯುಗದಲ್ಲಿ ಕಪಿಲ ಮಹರ್ಷಿಗೆ ಗಣಪತಿಯು ರಾಜ ಅಭಿಜೀತ ಮತ್ತು ರಾಣಿ ಗುಣವತಿಯ ಮಗನಾದ ಗಣರಾಜನಿಂದ ಅಸೂಯಾಪರಳಾದ ಗುಣದ ಚಿಂತಾಮಣಿ ರತ್ನವನ್ನು ಮರಳಿ ತಂದು ಒಪ್ಪಿಸಿದ ಸ್ಥಳವೆಂದು ಕ್ಷೇತ್ರ ಪುರಾಣದಲ್ಲಿ ಹೇಳಲಾಗುತ್ತದೆ. ಗರ್ಭಗುಡಿಯಲ್ಲಿ ಗಣಪನ ಸೊಂಡಿಲು ಎಡಕ್ಕೆ ತಿರುಗಿದ್ದು, ಕಣ್ಣುಗಳು ವಜ್ರದಂತೆ ಹೊಳೆಯುತ್ತಿವೆ. ವಿಗ್ರಹವು ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿದೆ. 
 
3 ಸಿದ್ಧಟೇಕ್‌ನ ಶ್ರೀ ಸಿದ್ಧಿ ವಿನಾಯಕ
 
 ಭೀಮಾ ನದಿಯ ದಡದಲ್ಲಿರುವ ನಗರ್ ಜಿಲ್ಲೆಯ ಕರ್ಜತ್ ತಾಲೂಕಿನಲ್ಲಿ ಈ ದೇಗುಲವಿದೆ. ಈ ದೇಗುಲವನ್ನು ಸ್ವತಃ ಮಹಾವಿಷ್ಣುವೇ ನಿರ್ಮಿಸಿದರೂ ಕಾಲಕ್ರಮೇಣ ಈ ದೇಗುಲ ನಶಿಸಿ ಅಹಲ್ಯಾಭಾಯಿ ಹೋಳ್ಕರ್‌ರವರ ನೇತೃತ್ವದಲ್ಲಿ ಪುನರ್‌ನಿರ್ಮಿಸಲಾಗಿದೆ. ಗಣಪತಿಯ ಸಹಾಯದಿಂದ ಮಧು ಮತ್ತು ಕೈಭಟ ಎನ್ನುವ ರಾಕ್ಷಸರನ್ನು ಶ್ರೀ ಮನ್ನಾನಾರಾಯಣನು ಇದೇ ಸ್ಥಳದಲ್ಲಿ ಸಂಹರಿಸಿದ ಎನ್ನುವ ಪ್ರತೀತಿ ಇದೆ. ಇದೊಂದೇ ದೇಗುಲದಲ್ಲಿ ಗಣಪನ ಸೊಂಡಿಲು ಬಲಭಾಗಕ್ಕೆ ತಿರುಗಿಕೊಡಿದ್ದು ಬೇರೆಡೆ ಕಾಣುವಂತೆ ಗಣಪನ ಹೊಟ್ಟೆ ಅಷ್ಟೇನೂ ದೊಡ್ಡದಾಗಿಲ್ಲ ಎನ್ನುವುದು ಇನ್ನೊಂದು ವಿಶೇಷ. ಆಲಯದ ಪ್ರದಕ್ಷಿಣೆ ಹಾಕಿ ಬರಲು ಯಾತ್ರಿಕರು ಒಂದು ಬೆಟ್ಟವನ್ನು ಹತ್ತಿ ಇಳಿಯಬೇಕಾಗುತ್ತದೆ. ಅದಕ್ಕೆ ಸುಮಾರು 30 ನಿಮಿಷಗಳು ತಗುಲುತ್ತವೆ. 
 
4. ರಂಜನ್‌ಗಾಂವ್‌ನ ಶ್ರೀ ಮಹಾಗಣಪತಿ
 
 ಈ ದೇಗುಲವು ಪುಣೆ ತಾಲೂಕಿನ ಶಿರೂರಿನಲ್ಲಿದೆ. ಮೊದಲಿಗೆ ಮಣಿಪುರ ಎಂದು ಕರೆಯಲಾಗುತ್ತಿದ್ದ ಸ್ಥಳವೀಗ ರಂಜನ್‌ಗಾವ್ ಎಂದು ಬದಲಾಗಿದೆ. ತ್ರಿಪುರಾಸುರರೆಂಬ ರಾಕ್ಷಸ ಸಹೋದರರ ಸಂಹಾರಕ್ಕಾಗಿ ಸಾಕ್ಷಾತ್ ಪರಮೇಶ್ವರನೇ ಗಣೇಶನನ್ನು ಪೂಜಿಸಲು ನಿರ್ಮಿಸಿದ ಎನ್ನಲಾಗುತ್ತದೆ. ವಿಶೇಷವೆಂದರೆ ಈ ದೇಗುಲದಲ್ಲಿ ಗಣಪತಿಯು ಅಯ್ಯಪ್ಪ ಸ್ವಾಮಿಯ ಭಂಗಿಯಲ್ಲಿ ಕುಳಿತಿದ್ದಾನೆ. ಈ ದೇವಾಲಯವನ್ನು ಸೂರ್ಯನ ಕಿರಣವು ನೇರವಾಗಿ ಗಣೇಶನ ಮೇಲೆ ಬೀಳುವಂತೆ ವಿನ್ಯಾಸಗೊಳಿಸಲಾಗಿದೆ. 
 
5. ಓಜಾರ್‌ನ ಶ್ರೀ ವಿಘ್ನೇಶ್ವರ
 
ಈ ದೇಗುಲವು ಕುಕಡಿ ನದಿ ದಡದಲ್ಲಿರುವ ಪುಣೆ ಜಿಲ್ಲೆಯ ಜುನ್ನಾರ್ನ್ ಪ್ರದೇಶದಲ್ಲಿದೆ. ಚಿಮಾಜಿ ಅಪ್ಪ ಎನ್ನುವವರು ಪೋರ್ಚುಗೀಸರ ವಿರುದ್ಧ ಗೆದ್ದ ವಿಜಯೋತ್ಸವಕ್ಕಾಗಿ ಸುಮಾರು ಕ್ರಿ.ಶ. 1785 ರಲ್ಲಿ ಕಟ್ಟಿಸಿರಬಹುದೆಂದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ. ಆದರೆ ಪುರಾಣದ ಪ್ರಕಾರ ಗಣಪತಿಯು ವಿಘ್ನಾಸುರನೆಂಬ ಅಸುರನನ್ನು ಸಂಹಾರ ಮಾಡಿದುದು ಇದೇ ಸ್ಥಳದಲ್ಲಿ ಎಂದು ಹೇಳಲಾಗಿದೆ. ಈ ಅಸುರನನ್ನು ಸಂಹಾರ ಮಾಡಿದ್ದಕ್ಕಾಗಿಯೇ ಗಣಪತಿಗೆ ವಿಘ್ನೇಶ್ವರನೆಂಬ ಹೆಸರು ಬಂತು ಎಂಬ ಪ್ರತೀತಿ. ಈ ದೇಗುಲದಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿರುವ ಗಣಪನ ಹಣೆಯ ಮೇಲ್ತುದಿಯಲ್ಲಿ ವಜ್ರವಿದೆ. ಗಣಪತಿಯ ಎರಡೂ ಬದಿಯಲ್ಲಿ ರಿದ್ದಿ ಮತ್ತು ಸಿದ್ಧಿಯರ ಸನ್ನಿಧಾನವಿದೆ. 
 
6. ಲೇಣ್ಯಾದಿಯ ಶ್ರೀ ಗಿರ್ಜಾತ್ಮಕ
 
 ಈ ದೇಗುಲವೂ ಸಹ ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನಲ್ಲಿದೆ. ಇದು ಬೌದ್ದ ವಿಹಾರಗಳ ಸಮೀಪದಲ್ಲಿದ್ದು ಗುಹೆಯಿಂದ ಕೂಡಿದ ಪ್ರದೇಶವಾಗಿದೆ. ಇಲ್ಲಿ ಬೌದ್ಧರ 18 ಗುಹೆಗಳನ್ನು ನೋಡಬಹುದು. 8 ನೇ ಗುಹೆಯಲ್ಲಿ ದೇವಾಲಯವಿದ್ದು ಇದಕ್ಕೆ ಗಣೇಶ್ ಲೇನಿ ಎಂದು ಕರೆಯುತ್ತಾರೆ. ಇಡೀ ಆಲಯವು ಏಕಶಿಲೆಯಲ್ಲಿ ರೂಪಗೊಂಡಿದ್ದು 307 ಮೆಟ್ಟಿಲುಗಳನ್ನು ಹೊಂದಿದೆ. ಇದರ ಪಡಸಾಲೆಯು 53 ಅಡಿ ಉದ್ದವಿದ್ದು, 51 ಅಡಿ ಅಗಲವಿದೆ ಮತ್ತು 7 ಅಡಿ ಎತ್ತರವಾಗಿದೆ. ಈ ಆಲಯದ ವಿಶೇಷವೇನೆಂದರೆ ಭಕ್ತಾದಿಗಳು ಮೂರ್ತಿಯನ್ನು ಮುಟ್ಟಿ ಪೂಜಿಸಬಹುದು. ಅದಲ್ಲದೇ ಇಡೀ ಆಲಯದಲ್ಲಿ ಯಾವುದೇ ವಿದ್ಯುದ್ದೀಪವಿಲ್ಲ. 
 
7. ಪಾಲಿಯ ಬಲ್ಲಾಳೇಶ್ವರ್
 
ಈ ದೇಗುಲವು ಮರಾಠಿಗರ ನೆಚ್ಚಿನ ದೇಗುಲವಾಗಿದೆ. ಇದು ರಾಯಘಡ್ ಜಿಲ್ಲೆಯ ಸಿಂಧುಗಡ್‌ನ ಪ್ರದೇಶವಿದು. ಒಬ್ಬ ಶೆಟ್ಟಿಯ ಮಗನಾದ ಬಲ್ಲಾಳ ಎಂಬ ಬಾಲಕ ಗಣೇಶನನ್ನು ಪ್ರತಿದಿನವೂ ಭಕ್ತಿಯಿಂದ ಪೂಜಿಸುತ್ತಿದ್ದು, ಓದಿನಲ್ಲಿ ಆಸಕ್ತಿ ಕಡಿಮೆಯಾದಾಗ ಆತನ ತಂದೆಯು ಬೈದು, ಆತ ಪೂಜಿಸುತ್ತಿದ್ದ ವಿಗ್ರಹವನ್ನು ದೂರಕ್ಕೆ ಎಸೆಯುತ್ತಾರೆ. ನಂತರ ಸ್ವಂತ ಮಗನನ್ನೇ ಒಂದು ಮರಕ್ಕೆ ಕಟ್ಟಿಹಾಕಿ ನಿನ್ನ ಗಣೇಶನನ್ನು ಕರಿ, ಅವನೇ ಬಿಡಿಸುತ್ತಾನೆ ಎಂದು ಹೇಳಿ ಹೋಗುತ್ತಾನೆ. ನಂತರ ಬಲ್ಲಾಳನು ಭಕ್ತಿಯಿಂದ ಬೇಡಿಕೊಂಡಾಗ ಆತನನ್ನು ಬಂಧನದಿಂದ ಬಿಡಿಸುತ್ತಾನೆ. ನಂತರ ಬಲ್ಲಾಳನು ಗಣೇಶನನ್ನು ಅಲ್ಲಿಯೇ ನೆಲೆಸುವಂತೆ ಕೇಳಿಕೊಳ್ಳುತ್ತಾನೆ. ಮುಗ್ಧ ಬಾಲಕನ ಮಾತಿಗೆ ಒಪ್ಪಿದ ಗಣೇಶ ಇಂದಿಗೂ ಅಲ್ಲಿಯೇ ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ. ಈಗ ಈ ಕ್ಷೇತ್ರವು ಅಷ್ಟವಿನಾಯಕನ ದೇಗುಲದಲ್ಲಿ ಒಂದಾಗಿದೆ
 
8. ಮಹಾಡ್‌ನ ಶ್ರೀ ವರದ್ ವಿನಾಯಕ
 
ಈ ದೇಗುಲವು ರಾಯಘಡ್ ಜಿಲ್ಲೆಯಲ್ಲಿನ ಖಲುಪರ್ ತಾಲೂಕಿನಲ್ಲಿದೆ. ಈ ಪ್ರದೇಶವು ಘೃತ್ಸಮದ ಋುಷಿ ವಾಸ ಮಾಡುತ್ತಿದ್ದ ಜಾಗವಾಗಿದೆ. ಆ ಋುಷಿಯಿಂದಲೇ ವಿನಾಯಕ ಮಂದಿರ ನಿರ್ಮಾಣವಾಯಿತು ಎಂದು ಹೇಳಲಾಗುತ್ತಿದೆ. ಈ ದೇಗುಲದಲ್ಲಿಯೂ ಗಣಪತಿಯ ಸೊಂಡಿಲು ಎಡಭಾಗಕ್ಕೆ ತಿರುಗಿದ್ದು, ದೇಗುಲದ ಗರ್ಭಗುಡಿಯಲ್ಲಿ 1892 ರಿಂದ ನಿರಂತರವಾಗಿ ತೈಲದೀಪವೊಂದು ಉರಿಯುತ್ತಿರುವುದನ್ನು ನಾವು ಕಾಣಬಹುದು. ದೇವಾಲಯದ ಗೋಪುರವು 25 ಅಡಿ ಎತ್ತರದಲ್ಲಿದ್ದು ಸುವರ್ಣ ಕಳಶವನ್ನು ಹೊಂದಿದೆ. ಅದಲ್ಲದೇ ಗೋಪುರದಲ್ಲಿ ಸರ್ಪಾಕೃತಿಯ ಲಾಂಛನವನ್ನು ನೋಡಬಹುದಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ