ಬೇರೆಲ್ಲಾ ಜಲಪಾತಗಳೂ ಮಳೆಗಾಲದಲ್ಲಿ ನದಿ ನೀರು ಹೆಚ್ಚಾದಾಗ ವೀಕ್ಷಿಸಲು ಚೆಂದ. ಆದರೆ ಹೊಗೇನಕಲ್ ಜಲಪಾತ ಮಾತ್ರ ಬೇಸಿಗೆಯಲ್ಲಿ ನದಿ ನೀರು ಕಡಿಮೆಯಾದಾಗ ನೋಡಲು ಸುಂದರ. ಏಕೆಂದರೆ ಮೆಟ್ಟೂರು ಜಲಾಶಯದ ಹಿನ್ನೀರು ಹೊಗೇನಕಲ್‌ವರೆಗೂ ಇದ್ದು, ಬೇಸಿಗೆಯಲ್ಲಿ ಜಲಾಶಯದಿಂದ ನೀರು ತೆರೆದು ಬಿಟ್ಟಾಗ ಹೊಗೇನಕಲ್‌ನಲ್ಲಿ ಹಿನ್ನೀರಿನ ಮಟ್ಟ ಕಡಿಮೆಯಾಗಿ ಜಲಪಾತಗಳು ಇನ್ನೂ ಆಳಕ್ಕೆ ಧುಮುಕಿ ಅವುಗಳ ಸೌಂದರ್ಯ ಇಮ್ಮಡಿಗೊಳ್ಳುತ್ತದೆ.
ಹೊಗೇನಕಲ್ ತಲುಪಲು ಎರಡು ಮಾರ್ಗಗಳಿವೆ. ಒಂದು ಬೆಂಗಳೂರಿನಿಂದ ಧರ್ಮಪುರಿ-ಪೆನ್ನಾಗರಂ ಮಾರ್ಗ, ಇನ್ನೊಂದು ಕೊಳ್ಳೇಗಾಲ-ಮಹೇಶ್ವರ ಬೆಟ್ಟ-ಗೋಪಿನಾಥಂ ಮಾರ್ಗ. ಮಹದೇಶ್ವರಂ ಬೆಟ್ಟದಿಂದ ಹೊಗೇನಕಲ್‌ಗೆ 47ಕಿ.ಮೀ. ದೂರ. ಸ್ವಂತ ವಾಹನವಿದ್ದರೆ ಮಾತ್ರ ಈ ಮಾರ್ಗ ಅನುಕೂಲ. ಏಕೆಂದರೆ ಮಹದೇಶ್ವರ ಬೆಟ್ಟದಿಂದ ಹೊಗೇನಕಲ್‌ಗೆ ರಸ್ತೆ ಇದೆ, ಸಾರಿಗೆ ಸೌಲಭ್ಯವಿಲ್ಲ. ಆದರೂ ಹೊಗೇನಕಲ್‌ನ ನಿಜವಾದ ಸೌಂದರ್ಯವನ್ನು ಸವಿಯಬೇಕಾದರೆ ಕರ್ನಾಟಕದ ಕಡೆಯಿಂದಲೇ ಪ್ರವೇಶಿಸಬೇಕು.
ರಾತ್ರಿ ಉಳಿದುಕೊಳ್ಳಲು ಇಲ್ಲಿ ಹೋಟೆಲ್, ಲಾಡ್ಜ್‌ಗಳು ಬೇಕಾದಷ್ಟಿವೆ. ಸಾರಿಗೆ ವ್ಯವಸ್ಥೆ, ಆಸ್ಪತ್ರೆ, ಅಂಚೆಕಚೇರಿ, ದೂರವಾಣಿ, ಬ್ಯಾಂಕ್, ತಮಿಳುನಾಡು ಗೆಸ್ಟ್ ಹೌಸ್, ಯೂತ್ ಹಾಸ್ಟೆಲ್ ಸೇರಿದಂತೆ ಎಲ್ಲಾ ಸೇವೆಗಳು ಇಲ್ಲಿ ಲಭ್ಯ.