ದಕ್ಷಿಣ ಕಾಶ್ಮೀರ, ಭಾರತದ ಸ್ಕಾಟ್ಲೆಂಡ್ - ಬೆಡಗಿನ ಕೊಡಗು

ಶನಿವಾರ, 22 ನವೆಂಬರ್ 2014 (14:07 IST)
ದಕ್ಷಿಣದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಹಸಿರು ಗಿರಿವನಗಳ ಸಿರಿವಂತ ಜಿಲ್ಲೆ. ತುಂಬಿ ಹರಿಯುವ ತೊರೆಗಳು, ದಟ್ಟ ಕಾಡುಗಳ, ಸುವಾಸನಾಭರಿತ ಕಾಫಿ ಹಾಗೂ ಏಲಕ್ಕಿ ತೋಟಗಳ ಮಧ್ಯೆ ಮಿಂಚು ಸುಳಿದಂತೆ ಅಲ್ಲಲ್ಲಿ ಕಂಡುಬರುವ ಜಲಪಾತಗಳು, ತನುವಿಗೂ ಮನಸಿಗೂ ಮುದ ನೀಡುವ ತಂಪು ತಂಪಾದ ಪರಿಸರ. ದೈನಂದಿನ ಜಂಜಾಟದಲ್ಲಿ ಬೆಂದು ನೊಂದ ಮನಗಳಿಗೆ ವಿಶ್ರಾಂತಿಯ ಸವಿ ಉಣಿಸುವ ರಮಣೀಯ ತಾಣ ಕೊಡಗು.
 
ಕರ್ನಾಟಕ ರಾಜಧಾನಿಯಿಂದ 250 ಕಿ.ಮೀ. ದೂರ ಹಾಗೂ ಸಮುದ್ರಮಟ್ಟದಿಂದ 1525 ಮೀಟರ್ ಎತ್ತರದಲ್ಲಿರುವ ಮಡಿಕೇರಿಯು ಕೊಡಗಿನ ಜಿಲ್ಲಾ ಕೇಂದ್ರ. ಭಾರತದ ಸ್ಕಾಟ್ಲೆಂಡ್ ಎಂಬ ಹೆಸರು ಗಳಿಸಿರುವ ಈ ನಾಡು, ಕೊಡಗಿನ ಕಿತ್ತಳೆ, ಕಾಫಿ, ಏಲಕ್ಕಿ, ಚಹಾ ತೋಟ, ಮಂಜು ಮುಸುಕಿದ ಕಾಡಿಗೆ ಪ್ರಸಿದ್ಧವಾಗಿದ್ದು, ಅತ್ಯದ್ಭುತ ಪ್ರವಾಸೀ ಧಾಮವಾಗಿ ಕಣ್ಮನ ಸೆಳೆಯುತ್ತಿದೆ.
 
ಕೊಡಗು ಎನ್ನುವುದರ ಮೂಲ ಹೆಸರು ಕೊಡೈಮಲೆನಾಡು ಎಂಬುದು. ಅಂದರೆ ಕಡಿದಾದ ಬೆಟ್ಟದಲ್ಲಿರುವ ದಟ್ಟ ಅರಣ್ಯ ಎಂದರ್ಥ. ಈ ಕೊಡಗಿನ ನಾಡಿನವರು ಕೊಡವರು. ಕನ್ನಡದಲ್ಲಿ ಈ ಪದಗುಚ್ಛದ ಮೂಲವನ್ನು ಹುಡುಕಿದರೆ, ಇದಕ್ಕೂ "ಕೊಡವ್ವ" ಅಂತ ಬೇಡಿಕೊಳ್ಳುವುದಕ್ಕೂ ಹತ್ತಿರದ ಸಂಬಂಧವಿದೆ ಅನಿಸುತ್ತದೆ. ಕೊಡ ಅಂದರೆ ಆಡುಭಾಷೆಯಲ್ಲಿ "ಕೊಡು", ಅವ್ವ ಅಂದರೆ ಕೊಡಗಿನಿಂದಲೇ ಹುಟ್ಟುವ ಪವಿತ್ರ ನದಿ ಕಾವೇರಿಯ ಸಂಬೋಧನೆ. ಇದೇ ಕಾರಣಕ್ಕೆ ಇಲ್ಲಿನವರು ಕೊಡವರು, ಇವರಾಡುವ ನುಡಿ ಕೊಡವ ಭಾಷೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ತನ್ನದೇ ಆದ ಹೆಸರು. ಕೂರ್ಗ್. ಇಲ್ಲಿನವರು ಕೂರ್ಗೀಸ್. ಜನರ ಆಡುಭಾಷೆ ಕೊಡವ ಆದರೂ, ಕನ್ನಡ, ತಮಿಳು, ಮಲಯಾಳ ಕೂಡ ಇಲ್ಲಿನವರಿಗೆ ಹತ್ತಿರ.
 
ಕೊಡಗಿಗೇ ವಿಶೇಷವಾಗಿರುವ ಮೂರು ಪ್ರಧಾನ ಹಬ್ಬಗಳಿವೆ. ಅವೆಂದರೆ ಸಾಂಪ್ರದಾಯಿಕ ಹುತ್ತರಿ ಹಬ್ಬ, ಕೈಲ್ ಪೊಲ್ದು ಹಾಗೂ ಕಾವೇರಿ ಸಂಕ್ರಮಣ. ಕಾವೇರಿಯ ಉಗಮಸ್ಥಾನ ತಲಕಾವೇರಿ ಇರುವುದು ಕೊಡವ ನಾಡಿನಲ್ಲೇ ಈ ಕಾರಣಕ್ಕೆ ಕಾವೇರಿ ಸಂಕ್ರಮಣಕ್ಕೆ ಹೆಚ್ಚಿನ ಮಹತ್ವ. ಈ ಮೂರು ಹಬ್ಬಗಳು ಬರುವುದು ಕೂಡ ಸೆಪ್ಟೆಂಬರ್-ಡಿಸೆಂಬರ್ ತಿಂಗಳ ನಡುವೆ.
 
ಇಂತಹ ಪ್ರಕೃತಿ ರಮಣೀಯ, ಸಮೃದ್ಧ ಹಸಿರಿನ ನಾಡಿನಲ್ಲಿ ಹಲವಾರು ಪ್ರವಾಸಿ ಸ್ಥಳಗಳು ಯಾತ್ರಿಕರ ಪ್ರಮುಖ ಆಕರ್ಷಣೆ. ಅವುಗಳಲ್ಲಿ ಪ್ರಧಾನವಾದುದು ಅಬ್ಬಿ ಜಲಪಾತ
 
ಅಬ್ಬಿ ಜಲಪಾತ: ಇದು ಅತ್ಯಾಕರ್ಷಕ ಜಲಪಾತವಾಗಿದ್ದು, ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿದೆ. ಇದು ಹಲವು ಚಲನಚಿತ್ರಗಳ ಶೂಟಿಂಗ್ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಏಲಕ್ಕಿ, ಕಾಫಿ ಕಾಡಿನೊಳಗೆ ಹಕ್ಕಿಗಳ ಕಲರವದ ಮಧ್ಯೆ ಭೋರ್ಗರೆಯುವ ಈ ಜಲಪಾತವನ್ನು ವೀಕ್ಷಿಸುವುದು ಕಣ್ಣಿಗೆ ಹಬ್ಬ.
 
ಬೇಸಿಗೆಯಲ್ಲೂ ಈ ಜಲಪಾತ ಧುಮ್ಮಿಕ್ಕಿ ಹರಿಯುತ್ತದೆ. ಇಲ್ಲಿಗೆ ಭೇಟಿ ನೀಡುವಾಗ ಬೈನಾಕ್ಯುಲರ್ (ದೂರದರ್ಶಕ) ಮತ್ತು ಕ್ಯಾಮರಾ ಇದ್ದರೆ ಉತ್ತಮ.
 
ಮಡಿಕೇರಿ ಕೋಟೆ: ಮಡಿಕೇರಿಯ ಮಧ್ಯಭಾಗದಲ್ಲಿರುವ 19ನೇ ಶತಮಾನದ ಕೋಟೆಯಲ್ಲಿ ಒಂದು ಮಂದಿರವಿದೆ, ಕಾರಾಗೃಹವಿದೆ, ಸಣ್ಣ ಮ್ಯೂಸಿಯಂ ಕೂಡ ಇದೆ. ಈ ಕೋಟೆಯ ಮೇಲೇರಿ ನೋಡಿದರೆ ಮಡಿಕೇರಿ ರಮಣೀಯ ದೃಶ್ಯ ಕಾಣಿಸುತ್ತದೆ. ಈಗ ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಕಾರ್ಯಾಚರಿಸುತ್ತಿದೆ. 1814ರಲ್ಲಿ ಈ ಕೋಟೆ ಕಟ್ಟಿಸಿದವರು ಲಿಂಗರಾಜೇಂದ್ರ ಒಡೆಯರ್ II.
 
ಓಂಕಾರೇಶ್ವರ ಮಂದಿರ: ಮಡಿಕೇರಿಯಲ್ಲಿರುವ ಓಂಕಾರೇಶ್ವರ ಮಂದಿರ 1820ರ ಅವಧಿಯಲ್ಲಿ ಕಟ್ಟಿಸಿದ್ದು. ಇಸ್ಲಾಮಿಕ್ ಶೈಲಿಯಲ್ಲಿದೆ. ಇಲ್ಲಿರುವ ಶಿವಲಿಂಗವನ್ನು ಕಾಶಿಯಿಂದ ತಂದು ಪ್ರತಿಷ್ಠಾಪಿಸಲಾಗಿದೆ ಎನ್ನಲಾಗುತ್ತಿದೆ.
 
ರಾಜರ ಆಸನ (ರಾಜಾಸ್ ಸೀಟ್): ದಂತ ಕಥೆಗಳ ಪ್ರಕಾರ, ಕೊಡಗಿನ ರಾಜ ಮಹಾರಾಜರು ಸಂಜೆಯನ್ನು ಇಲ್ಲಿ ಕಳೆಯುತ್ತಿದ್ದರು. ಈ ತಾಣವು ಅತ್ಯಂತ ಪ್ರಸಿದ್ಧವಾಗಿರುವುದು ಸುಂದರ ಸೂರ್ಯಾಸ್ತ ವೀಕ್ಷಣೆಗಾಗಿ.
 
ನಾಗರಹೊಳೆ: ಕೊಡಗು ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಪ್ರವಾಸೀ ತಾಣಗಳಲ್ಲಿ ನಾಗರಹೊಳೆ ಅಭಯಾರಣ್ಯ ಪ್ರಮುಖವಾದುದು. ನಾಗರ ಹಾವಿನಂತೆ ಸುತ್ತಿ ಹೋಗುವ ನದಿಯಿಂದಾಗಿ ನಾಗರ ಹೊಳೆ ಎಂಬ ಹೆಸರು. ಈ ಅಭಯಾರಣ್ಯ ಸುಮಾರು 640 ಚದರ ಕಿ.ಮೀ. ವಿಸ್ತಾರ ಹೊಂದಿದೆ. ದಟ್ಟ ಅರಣ್ಯ, ಹರಿವ ತೊರೆಗಳು, ನದಿಗಳು, ಹುಲ್ಲುಗಾವಲು ಪ್ರದೇಶ ಇತ್ಯಾದಿಗಳು ಸಮೃದ್ಧವಾಗಿದ್ದು, ಆನೆ, ಚಿರತೆ, ಹುಲಿ, ಜಿಂಕೆ, ಕಾಡುಕೋಣಗಳು ಇಲ್ಲಿ ಸಾಕಷ್ಟಿವೆ. ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ಅರಣ್ಯ ಇಲಾಖೆಯೇ ನಾಗರಹೊಳೆ ಅಭಯಾರಣ್ಯ ಪ್ರವಾಸದ ವ್ಯವಸ್ಥೆ ಏರ್ಪಡಿಸುತ್ತದೆ. ಟ್ರೆಕ್ಕಿಂಗ್‌ಗೆ ಕೂಡ ಅವಕಾಶವಿದೆ. ಪೂರ್ವಾನುಮತಿ ಪಡೆಯುವುದು ಅಗತ್ಯ.
 
ತಲಕಾವೇರಿ: ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯು ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಅತ್ಯಂತ ಆಕರ್ಷಕ ತಾಣ. ಹಿಂದೂ ಪುರಾಣಗ್ರಂಥಗಳ ಪ್ರಕಾರ ಸಪ್ತನದಿಗಳಲ್ಲೊಂದಾಗಿರುವ ಕಾವೇರಿ ಅತ್ಯಂತ ಪವಿತ್ರ. ಸಮುದ್ರಮಟ್ಟದಿಂದ ಸುಮಾರು 4500 ಅಡಿ ಎತ್ತರದಲ್ಲಿರುವ ಬ್ರಹ್ಮಗಿರಿ ಬೆಟ್ಟದ ತಲಕಾವೇರಿಯ ಕುಂಡಿಕೆಯಲ್ಲಿ ಪುಟ್ಟ ಒರತೆಯ ರೂಪದಲ್ಲಿ ಕಾವೇರಿ ಹುಟ್ಟುತ್ತಾಳೆ. ನಂತರ ಪುನಃ ಭೂಗತವಾಗಿ ಹರಿಯುವ ಈ ನದಿ ಸ್ವಲ್ಪದೂರದಲ್ಲಿ ಹೊರಗೆ ಗೋಚರಿಸುತ್ತದೆ. ಕಾವೇರಿಯು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸುಮಾರು 800 ಕಿ.ಮೀ. ದೂರ ಕ್ರಮಿಸಿ, ತಮಿಳುನಾಡಿನ ಪೂಂಪುಹಾರ್ ಎಂಬಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
 
ಕುಂಡಿಕೆಯ ಬಳಿ ಒಂದು ಪುಟ್ಟ ಗುಡಿ ಇದೆ ಮತ್ತು ಎದುರಿನ ದೊಡ್ಡ ಕೊಳದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡುತ್ತಾರೆ. ಇಲ್ಲಿ ಪುರಾತನ, ಅಪರೂಪದ ಶಿವಲಿಂಗವಿರುವ ಶಿವ ದೇವಸ್ಥಾನ ಮತ್ತು ಗಣಪತಿ ದೇವಸ್ಥಾನಗಳಿವೆ. ಸಮೀಪದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವವರು ಅಗಸ್ತ್ಯ ಮುನಿಗೆ ದರ್ಶನ ನೀಡಿದರೆನ್ನಲಾದ ಪವಿತ್ರ ಅಶ್ವತ್ಥವೃಕ್ಷವಿದೆ.
 
ಇಲ್ಲಿ ತುಲಾ ಸಂಕ್ರಮಣವನ್ನು ಕಾವೇರಿ ಸಂಕ್ರಮಣವಾಗಿ (ಈ ಬಾರಿ ಅಕ್ಟೋಬರ್ 18) ಆಚರಿಸಲಾಗುತ್ತಿದ್ದು, ಆ ದಿನ ಪಾರ್ವತಿ ದೇವಿಯು ಪವಿತ್ರ ಕುಂಡಿಕೆಯಲ್ಲಿ ತೀರ್ಥೋದ್ಭವದ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬ ನಂಬಿಕೆ. ಆ ದಿನ ದಿಢೀರ್ ಆಗಿ ಕುಂಡಿಕೆಯಲ್ಲಿ ನೀರಿನ ಹರಿವು ಹೆಚ್ಚಾಗುತ್ತದೆ.
 
ಬ್ರಹ್ಮಗಿರಿ ಶಿಖರ: ತಲಕಾವೇರಿಯ ಸಮೀಪದಲ್ಲೇ ಬ್ರಹ್ಮಗಿರಿ ಶಿಖರವಿದೆ. ಸಪ್ತಋಷಿಗಳು ಇಲ್ಲಿ ವಿಶೇಷ ಯಜ್ಞ ಮಾಡಿದರೆಂಬ ಕಥನವಿದೆ.
 
ಇರ್ಪು ಜಲಪಾತ: ಬ್ರಹ್ಮಗಿರಿ ಸಮೀಪದಲ್ಲೇ ಶ್ರೀರಾಮ-ಲಕ್ಷ್ಮಣರು ಸೀತಾನ್ವೇಷಣೆ ಅವಧಿಯಲ್ಲಿ ಭೇಟಿ ನೀಡಿದ್ದರು ಎಂದು ನಂಬಲಾದ ಇರ್ಪು ಎಂಬ ತಾಣವಿದೆ. ಇಲ್ಲಿ ಲಕ್ಷ್ಮಣತೀರ್ಥ ಎಂಬ ನದಿ ಹರಿಯುತ್ತದೆ. ಶ್ರೀರಾಮನು ಕುಡಿಯಲು ನೀರು ತರುವಂತೆ ಲಕ್ಷ್ಮಣನಿಗೆ ಹೇಳಿದಾಗ, ಆತ ಬಿಲ್ಲಿನಿಂದ ಬ್ರಹ್ಮಗಿರಿಗೆ ಬಾಣ ಹೂಡಿ, ಲಕ್ಷ್ಮಣತೀರ್ಥದ ಹುಟ್ಟಿಗೆ ಕಾರಣನಾದ ಎನ್ನುತ್ತದೆ ಪುರಾಣ.
 
ಈ ಲಕ್ಷ್ಮಣತೀರ್ಥವು ಬೆಟ್ಟದಿಂದ ಜಿಗಿಯುವಾಗ ಕಂಡುಬರುವ ಇರುಪ್ಪು ಜಲಪಾತವನ್ನು ನೋಡುವುದು ಕಣ್ಣಿಗೆ ಹಬ್ಬ. ಶಿವರಾತ್ರಿ ದಿನ ಪಾಪ ತೊಳೆಯುವ ಲಕ್ಷ್ಮಣತೀರ್ಥದಲ್ಲಿ ಮೀಯಲು ಭಕ್ತಾದಿಗಳು ಇಲ್ಲಿ ಬರುತ್ತಾರೆ. ಇದು ಮಡಿಕೇರಿಯಿಂದ 80 ಕಿ.ಮೀ., ನಾಗರಹೊಳೆಯಿಂದ 25 ಕಿ.ಮೀ. ಹಾಗೂ ಗೋಣಿಕೊಪ್ಪದಿಂದ 30 ಕಿ.ಮೀ. ದೂರದಲ್ಲಿದೆ.
 
ದುಬಾರೆ ಗಜ ಕೇಂದ್ರ: ಸಿದ್ದಾಪುರ-ಕುಶಾಲನಗರ ರಸ್ತೆಯಲ್ಲಿ ಕಾವೇರಿ ತಟದಲ್ಲಿ ಅರಣ್ಯ ಇಲಾಖೆಗೆ ಸೇರಿದ ಆನೆಗಳ ತರಬೇತಿ ಕೇಂದ್ರವೇ ದುಬಾರೆ. ಪಳಗಿಸಲಾದ ಆನೆಗಳ ಸಹಾಯದಿಂದಲೇ ಆನೆಗಳನ್ನು ಹಿಡಿದು ತರಬೇತಿ ನೀಡಲಾಗುತ್ತದೆ. ಇಲ್ಲಿ ಮಾವುತರ ಸಹಾಯದಿಂದ ಆನೆ ಸವಾರಿಯನ್ನೂ ಸವಿಯಬಹುದು. ಸಂಜೆ ವೇಳೆ ಆನೆಗಳು ಸ್ನಾನಕ್ಕೆ ಬರುತ್ತವೆ, ಅವುಗಳಿಗೆ ರಾಗಿ ಮತ್ತು ಬೆಲ್ಲದ ದೊಡ್ಡ ದೊಡ್ಡ ಉಂಡೆಗಳನ್ನು ಉಣಬಡಿಸಲಾಗುತ್ತದೆ.
 
ಕಾವೇರಿ ನಿಸರ್ಗಧಾಮ: ಕುಶಾಲನಗರದಿಂದ ಸುಮಾರು 5 ಕಿ.ಮೀ. ದೂರವಿರುವ ಇದು ನೋಡಲೇಬೇಕಾದ ಪ್ರವಾಸಿಧಾಮಗಳಲ್ಲೊಂದು. ಇಲ್ಲಿ ಆನೆಸವಾರಿ ಇದೆ, ಜಿಂಕೆಗಳ ಪಾರ್ಕ್, ಬೋಟಿಂಗ್, ತೂಗು ಸೇತುವೆ ಮುಂತಾದವು ನೋಡಲೇಕೇಬಾದ ತಾಣಗಳು.
 
ಭಾಗಮಂಡಲ: ಕಾವೇರಿ, ಕನ್ನಿಕಾ ಮತ್ತು ಸುಜ್ಯೋತಿ ಎಂಬ ಮೂರು ನದಿಗಳ ಸಂಗಮ ಕ್ಷೇತ್ರವಾದ ಭಾಗ ಮಂಡಲದ ತ್ರಿವೇಣಿ ಸಂಗಮದಲ್ಲಿ ಕೇರಳೀಯ ಶೈಲಿಯ ಆಕರ್ಷಕ ದೇವಸ್ಥಾನವಿದೆ. ಇದು ವಿರಾಜಪೇಟೆಯಿಂದ ಸುಮಾರು 50 ಕಿ.ಮೀ. ಹಾಗೂ ಮಡಿಕೇರಿಯಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ.
 
ಟಿಬೆಟ್ ಕಾಲನಿ: ಕುಶಾಲನಗರದಿಂದ ಮೈಸೂರಿನತ್ತ ತೆರಳುವ ಹಾದಿಯಲ್ಲಿ ಸುಮಾರು ಏಳೆಂಟು ಕಿ.ಮೀ. ಕ್ರಮಿಸಿದರೆ, ಟಿಬೆಟ್ ನಿರಾಶ್ರಿತರ ತಾಣವೊಂದು ಕಾಣಸಿಗುತ್ತದೆ. ಬೌದ್ಧ ಮಂದಿರವೊಂದು ಇಲ್ಲಿದ್ದು, ಟಿಬೆಟ್ ಬೌದ್ಧ ಸನ್ಯಾಸಿಗಳು ಇಲ್ಲಿರುತ್ತಾರೆ. ಶಾಂತಿ ಅರಸಿ ಬರುವವರಿಗೆ ಇದು ಸೂಕ್ತವಾದ ತಾಣವೂ ಹೌದು.
 
ಕುಶಾಲನಗರ ಸಮೀಪ ಕಾವೇರಿ ನದಿಗೆ ಕಟ್ಟಲಾದ ಹಾರಂಗಿ ಜಲಾಶಯವು ಮತ್ತೊಂದು ಪ್ರವಾಸಿ ಕೇಂದ್ರ.
 
ತಲುಪುವುದು ಹೇಗೆ?
ಕೊಡಗು ರಸ್ತೆ ಮಾರ್ಗದಿಂದ ಚೆನ್ನಾಗಿ ಸಂಪರ್ಕಿತವಾಗಿದೆ. ಆದರೆ ರೈಲು ಮಾರ್ಗ ಇಲ್ಲ. ಮೈಸೂರು-ಮಂಗಳೂರು ಹೆದ್ದಾರಿಯು ಕೊಡಗು ಮೂಲಕ ಹಾಹುಹೋಗುತ್ತದೆ. ಜಿಲ್ಲಾ ಮುಖ್ಯ ಕೇಂದ್ರ ಮಡಿಕೇರಿಯು ಬೆಂಗಳೂರಿನಿಂದ 260 ಕಿ.ಮೀ. ಹಾಗೂ ಮೈಸೂರಿನಿಂದ 120 ಕಿ.ಮೀ. ದೂರದಲ್ಲಿದೆ. ಮಂಗಳೂರಿನಿಂದ 135 ಕಿ.ಮೀ. ಹಾಗೂ ಕೇರಳದ ಕಣ್ಣನೂರಿನಿಂದ 120 ಕಿ.ಮೀ. ದೂರದಲ್ಲಿದೆ. ಬಸ್ ವ್ಯವಸ್ಥೆ ಸಾಕಷ್ಟಿದೆ.
 
ಏನೇನು ಕೊಳ್ಳಬಹುದು?:
ಸೀಸನ್ ಅವಧಿಯಲ್ಲಿ ಕಿತ್ತಳೆ, ಕಾಫಿ, ಜೇನು, ಏಲಕ್ಕಿ, ಕಾಳುಮೆಣಸು ಇಲ್ಲಿ ಪ್ರಸಿದ್ಧ.
 
ಹವಾಮಾನ: ವರ್ಷಪೂರ್ತಿ ಒಳ್ಳೆಯ ಹವಾಮಾನ ಇರುತ್ತದೆ. ಜೂನ್ ತಿಂಗಳಿಂದ ಸೆಪ್ಟೆಂಬರ್‌ವರೆಗೆ ಮುಂಗಾರು ಮಳೆಯಿರುತ್ತದೆ.
 
 
 
 
 
ಅರಕು ಕಣಿವೆಯ ರಮಣೀಯ ತಾಣ
 
ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಸುಮಾರು 115 ಕಿ.ಮೀ. ದೂರದಲ್ಲಿದೆ ಪ್ರಕೃತಿ ರಮಣೀಯ ನಿಸರ್ಗ ಧಾಮ - ಅರಕು ಕಣಿವೆ. ಒರಿಸ್ಸಾ ರಾಜ್ಯಕ್ಕೆ ತಗುಲಿಕೊಂಡಂತೆ ಗಡಿಯಲ್ಲಿರುವ ಈ ನಾಡು ಬೆಟ್ಟಗುಡ್ಡಗಳು, ಆಕರ್ಷಕ ಹವಾಮಾನ ಮತ್ತು ಕಣಿವೆಗಳಿಂದಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸಮೃದ್ಧ ಪ್ರಾಕೃತಿಕ ವೈಭವಕ್ಕಾಗಿಯೇ ಇದು ಪ್ರಸಿದ್ಧವಾಗಿದೆ. ಈ ರಮಣೀಯ ಕಣಿವೆಯ ವಿಸ್ತಾರ ಸುಮಾರು 35 ಕಿ.ಮೀ. ಸಮುದ್ರ ಮಟ್ಟದಿಂದ ಇದು 700ರಿಂದ 800 ಮೀಟರ್ ಎತ್ತರದಲ್ಲಿದೆ.
 
ಇಕ್ಕೆಲಗಳಲ್ಲಿ ದಟ್ಟಾರಣ್ಯದ ನಡುವೆ ಘಾಟ್ ರಸ್ತೆಯಲ್ಲಿ ಈ ಕಣಿವೆಯತ್ತ ತೆರಳುವುದೇ ಒಂದು ಬಲುದೊಡ್ಡ ಆನಂದಮಯ ಪ್ರಯಾಣದ ಅನುಭವವನ್ನು ನೀಡುತ್ತದೆ. ಅತ್ಯಾಕರ್ಷಕ ಟ್ರೆಕ್ಕಿಂಗ್ ಅನುಭವವನ್ನು ನೀವು ಪಡೆಯಬಹುದು. ಮಾರ್ಗ ಮಧ್ಯೆ 46 ಸುರಂಗಗಳು ಮತ್ತು ಸೇತುವೆಗಳು ನಿಮ್ಮ ಮನತಣಿಸುತ್ತವೆ. 
 
ಅರಕು ಕಣಿವೆಗೆ ತೆರಳುವ ಮಾರ್ಗದಲ್ಲಿರುವ ಅನಂತಗಿರಿ ಬೆಟ್ಟಗಳು ಕಾಫಿ ಬೆಳೆಗೆ ಪ್ರಸಿದ್ಧ. ಸಮೀಪದ ಅತ್ಯಾಕರ್ಷಕ ಪ್ರವಾಸೀ ತಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಬೋರಾ ಗುಹೆಗಳು. ಇದು ಅರಕು ಕಣಿವೆಯಿಂದ 30 ಕಿ.ಮೀ. ದೂರದಲ್ಲಿದೆ.
 
ಇಲ್ಲಿಗೆ ತಲುಪುವುದು ಹೇಗೆ?
ವಾಯುಮಾರ್ಗ: ಸಮೀಪದ ವಿಮಾನ ನಿಲ್ದಾಣವಿರುವುದು ವಿಶಾಖಪಟ್ಟಣ. 115 ಕಿ.ಮೀ. ದೂರದಲ್ಲಿದೆ.
 
ರೈಲು ಮಾರ್ಗ: ಅರಕು ಎಂಬುದು ರೈಲು ನಿಲ್ದಾಣ.
 
ರಸ್ತೆ ಮಾರ್ಗ: ವಿಶಾಖಪಟ್ಟಣದಿಂದ ಬಸ್ ಸೇವೆ ಲಭ್ಯವಿದೆ. ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆಯು ಪ್ರತಿದಿನ ವಿಶಾಖಪಟ್ಟಣದಿಂದ ಪ್ರವಾಸವನ್ನೂ ಏರ್ಪಡಿಸುತ್ತಿದೆ.

ವೆಬ್ದುನಿಯಾವನ್ನು ಓದಿ