ಕೊನೆಗೂ ಬಹು ನಿರೀಕ್ಷೆಯ ಅಕ್ಷಯ್ ಕುಮಾರ್ ಸಿನಿಮಾ ಬಿಡುಗಡೆಯಾಗಿದೆ. ಅದರೆ ಅದರಲ್ಲಿ ಏನುಂಟು ಏನಿಲ್ಲ ಎಂಬ ಪ್ರಶ್ನೆ ಕೇಳಿದರೆ ಇಲ್ಲವೆನ್ನುವುದೇ ಹೆಚ್ಚು ತೂಕ ಬರಬಹುದು. ಈಗಾಗಲೇ ತೆರೆಕಂಡು ನೆಲೆಕಂಡುಕೊಂಡಿರುವ ರಬ್ನೇ ಬನಾದಿ ಜೋಡಿ, ಗಜನಿಗಳಿಗೆ ಇದರಿಂದ ಯಾವುದೇ ತೊಂದರೆಯಾಗದು ಎಂದು ಹೇಳಬಹುದಾದಷ್ಟು ಚಿತ್ರವನ್ನು ಕುಲಗೆಡಿಸಲಾಗಿದೆ ಎಂಬುದು ಬಹುತೇಕ ವಿಮರ್ಶಕರ ಅಭಿಪ್ರಾಯ.
ಒಬ್ಬ ಸ್ಟಾರ್ ನಾಯಕ ಮತ್ತು ಮಿಂಚುಳ್ಳಿ ಬೆಡಗಿಯನ್ನಿಟ್ಟುಕೊಂಡು ನೇರ ಚಿತ್ರಕಥೆಯಿಲ್ಲದೆ ನಿರ್ದೇಶನಕ್ಕೆ ಹೊರಟರೆ ಇದಕ್ಕಿಂತ ಉತ್ತಮ ಚಿತ್ರ ಕೊಡಲಾಗದು. ಹಾಗೆಂದು ನೀವು ನಿರ್ದೇಶಕ ನಿಖಿಲ್ ಅಡ್ವಾಣಿಯವರನ್ನು ಟೀಕಿಸುವ ಕಾರ್ಯಕ್ಕೆ ಕೈ ಹಾಕುವ ಮೊದಲು ಅವರ ಹಿಂದಿನ ಸಾಧನೆಗಳನ್ನೂ ಗಮನಿಸಬೇಕಾಗುತ್ತದೆ. ಕಲ್ ಹೋ ನಾ ಹೋ, ಸಲಾಂ ಇ ಇಷ್ಕ್ ಚಿತ್ರಗಳನ್ನು ನಿರ್ದೇಶಿಸಿದ ಅನುಭವವನ್ನು ಬೆನ್ನಿಗೆ ಕಟ್ಟಿಕೊಂಡ ನಿಖಿಲ್ ಅಡ್ವಾಣಿ ಇಲ್ಲಿ ಎಡವಿರುವುದು ಮಾತ್ರ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಕುಚ್ ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಘಮ್‌ನಂತಹ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅಡ್ವಾಣಿಯವರ ನಿರ್ದೇಶನದ ಚಿತ್ರವಿದು ಎಂದರೆ ಯಾರೂ ನಂಬಲಾರರು. ಇಲ್ಲಿ ಮಹತ್ವದ ಕೊರತೆ ಎದ್ದು ಕಾಣುವುದು ಚಿತ್ರಕಥೆಯಲ್ಲಿ. ಎಲ್ಲೆಲ್ಲೋ ನಕಾರಣವಾಗಿ ಸಾಗುವ ಚಿತ್ರಕಥೆಯನ್ನು ಬರೆದವರು ಶ್ರೀಧರ್ ರಾಘವನ್.
ದೆಹಲಿಯ ಚಾಂದಿನಿ ಚೌಕ್‌ನಲ್ಲಿ ತರಕಾರಿ ಹಚ್ಚುವುದು ಸಿದ್ಧು (ಅಕ್ಷಯ್ ಕುಮಾರ್) ಕೆಲಸ. ಈ ಗುಲಾಮಗಿರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿರುತ್ತಾನೆ. ಅದಕ್ಕಾಗಿ ಸಿದ್ಧು ಜ್ಯೋತಿಷಿಗಳು, ಗಿಣಿ ಶಾಸ್ತ್ರಕಾರರು ಮತ್ತು ನಕಲಿ ಫಕೀರರ ಬಳಿ ಸುಳಿದಾಡುತ್ತಾನೆ. ತನಗಿಂತ ಇತರರ ಮೇಲೆ ಹೆಚ್ಚು ನಂಬಿಕೆ ಹೊಂದಿರುವ ವ್ಯಕ್ತಿತ್ವ ಸಿದ್ಧುವಿನದು. ಈ ನಿಟ್ಟಿನಲ್ಲಿ ತಂದೆ ದಾದಾ (ಮಿಥುನ್ ಚಕ್ರವರ್ತಿ) ಮಾಡಿದ ಯತ್ನಗಳೂ ವಿಫಲವಾಗುತ್ತವೆ. ಇಂಥಾ ಹೊತ್ತಿನಲ್ಲಿ ಚೀನಾದಿಂದ ಬಂದ ಇಬ್ಬರು ಅಪರಿಚಿತರು ಸಿದ್ಧುವನ್ನು ಬಂಧ ಮುಕ್ತಗೊಳಿಸಿ ತಮ್ಮ ದೇಶಕ್ಕೆ ಕರೆದೊಯ್ಯುತ್ತಾರೆ.
ತಮ್ಮ ನಾಯಕನ ಅವತಾರ ಎಂದು ಭಾವಿಸಿ ಅವರು ಸಿದ್ಧುವನ್ನು ಚೀನಾಕ್ಕೆ ಕರೆದೊಯ್ದಿರುತ್ತಾರೆ. ಚೀನೀ ಭಾಷೆಯನ್ನು ಚೊಪ್ಸ್‌ಟಿಕ್ (ರಣವೀರ್ ಶೌರಿ) ಭಾಷಾಂತರಿಸುವ ಕೆಲಸವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಸಂಪತ್ಭರಿತ ಚೀನಾದಲ್ಲಿ ಹೆಣ್ಣು, ಹೆಂಡದೊಂದಿಗೆ ಸಿದ್ಧು ಮೆರೆದಾಡುತ್ತಾನೆ. ಆದರೆ ಚೀನಾದ ಗ್ರಾಮವೊಂದರ ಕುಖ್ಯಾತ ಸ್ಮಗ್ಲರ್ ಹೊಜೊ (ಗೋರ್ಡನ್ ಲಿಯು)ನನ್ನು ಮಟ್ಟ ಹಾಕಲು ಸಿದ್ಧುವನ್ನು ಕರೆದೊಯ್ಯಲಾಗಿತ್ತು ಎಂದು ತಿಳಿದಾಗ ತುಂಬಾ ತಡವಾಗಿರುತ್ತದೆ.
ಕಾಲವಾದ ತಂದೆ ಮತ್ತು ತಂಗಿ ಸುಜಿ(ದೀಪಿಕಾ ಪಡುಕೋಣೆ)ಗೆ ಶ್ರದ್ಧಾಂಜಲಿ ಅರ್ಪಿಸಲು ಚೀನಾಕ್ಕೆ ಬಂದಿದ್ದ ಸಖಿ (ದೀಪಿಕಾ ಪಡುಕೋಣೆ ದ್ವಿಪಾತ್ರ) ಅಲ್ಲಿ ಸಿದ್ಧುವನ್ನು ಭೇಟಿ ಮಾಡುತ್ತಾಳೆ. ಆದರೆ ನಿಜಕ್ಕೂ ಸಖಿಯ ತಂದೆ ಮತ್ತು ತಂಗಿ ಸತ್ತಿರುವುದಿಲ್ಲ. ಅವರನ್ನು ಹೊಜೊ ಕೊಲ್ಲಲು ಯತ್ನಿಸಿರುತ್ತಾನೆ. ಮುಂದೆ ಹೊಜೊನ ಜನರಿಂದ ಸಿದ್ಧು ತೊಂದರೆಗೊಳಗಾಗುತ್ತಾನೆ. ಅದು ಎಲ್ಲಿಯವರೆಗೆ ಮುಂದುವರಿಯುತ್ತದೆ ಎಂದರೆ ಸಿದ್ಧುವಿನ ತಂದೆ ದಾದಾನನ್ನೇ ಹೊಜೊ ಮುಗಿಸಿ ಕೇಕೆ ಹಾಕುತ್ತಾನೆ.
ನಂತರ ಸೇಡು ತೀರಿಸಿಕೊಳ್ಳುವ ಸಲುವಾಗಿ ಸಿದ್ಧು ಕುಂಗ್ ಫು ಕಲಿಯುವ ಮನಸ್ಸು ಮಾಡುತ್ತಾನೆ. ಆಗ ಎದುರಾಗುವುದು ಸಖಿ ಮತ್ತು ಸುಜಿಯ ತಂದೆ ಪೊಲೀಸ್ ಅಧಿಕಾರಿ ಚಿಯಾಂಗ್. ಹೊಜೊ ಜತೆಗಿನ ಕಾಳಗದ ಸಮಯದಲ್ಲಿ ಚಿಯಾಂಗ್ ತನ್ನ ಸ್ಮರಣ ಶಕ್ತಿ ಕಳೆದುಕೊಂಡಿದ್ದ. ಆದರೆ ಕುಂಗ್ ಫು ಯುದ್ಧ ಕಲೆಯನ್ನು ಮಾತ್ರ ಮರೆತಿರಲಿಲ್ಲ. ಸಿದ್ಧುವನ್ನು ಶಿಷ್ಯನನ್ನಾಗಿ ಸ್ವೀಕರಿಸುವ ಆತ ಎಲ್ಲವನ್ನೂ ಹೇಳಿಕೊಡುತ್ತಾನೆ. ಮುಂದೆ ಸಿದ್ಧು ತಾನೇನು ಮಾಡಬೇಕೋ ಅದನ್ನು ಮಾಡಿ ಮುಗಿಸುತ್ತಾನೆ. ಜತೆಗೆ ಸಖಿಯ ಜತೆಗಿನ ಪ್ರೇಮಕ್ಕಿದ್ದ ಅಡೆತಡೆಗಳೆಲ್ಲ ನಿವಾರಣೆಯಾಗುತ್ತದೆ.
ಚೀನಾದಲ್ಲಿ ನಡೆಯುವ ಅಪರಾ ತಪರಾಗಳು ಚಿತ್ರದಲ್ಲಿ ಮುಖ್ಯ ಪಾತ್ರ ಪಡೆಯುತ್ತವೆ. ಇಲ್ಲಿ ಹೆಚ್ಚಾಗಿ ಕಾಣುವುದು ಒಂದಕ್ಕೊಂದು ಸಂಬಂಧವಿಲ್ಲದ ಅಸಮಂಜಸ ದೃಶ್ಯಗಳು. ಇವುಗಳಿಗೆ ಸಮರ್ಥನೆ ಕೊಡಲು ಎಲ್ಲಿಯೂ ಕಾರಣಗಳೇ ಸಿಗುವುದಿಲ್ಲ. ಚಿತ್ರಕಥೆ ಪೂರ್ತಿ ಗೊಂದಲಮಯವಾಗಿಯೇ ಇದೆ. ಅಕ್ಷಯ್ ಕುಮಾರ್ ಹೀರೋಯಿಸಂ ಮೆರೆಸುವುದರಲ್ಲೇ ನಿರ್ದೇಶಕರ ಗಮನ ಹೆಚ್ಚಾದಂತಿದೆ. ಶಾಂಘೈ ನಗರ, ಚೀನಾದ ಮಹಾಗೋಡೆ ಮುಂತಾದೆಡೆ ಚಿತ್ರೀಕರಿಸಲಾಗಿದೆ. ಸಾಹಸ ದೃಶ್ಯಗಳು ಗಮನ ಸೆಳೆದರೂ ಹಾಸ್ಯ ಹಾಗೂ ಸೆಂಟಿಮೆಂಟ್ ದೃಶ್ಯಗಳು ಹಾಸ್ಯಾಸ್ಪದವಾಗುತ್ತದೆ.