'ವಿಕ್ಟರಿ'ಯಲ್ಲಿ ಹರ್ಮನ್ ಬಾವೇಜಾ ವಿಜಯ?

ಶುಕ್ರವಾರ, 30 ಜನವರಿ 2009 (18:53 IST)
ಚಿತ್ರ: ವಿಕ್ಟರಿ
ತಾರಾಗಣ: ಹರ್ಮನ್ ಬಾವೇಜಾ, ಅಮೃತಾ ರಾವ್, ಅನುಪಮ್ ಖೇರ್
ನಿರ್ದೇಶನ: ಅಜಿತ್‌ಪಾಲ್ ಮಂಗಟ್

ಚಿತ್ರದ ಹೆಸರು 'ವಿಕ್ಟರಿ'. ಇದು ಕ್ರಿಕೆಟನ್ನು ಆಧರಿಸಿದ ಚಿತ್ರ. ಹೆಸರಿಗೆ ತಕ್ಕಂತೆ ನಾಯಕನ ಹೆಸರು ಕೂಡ ವಿಜಯ್ ! ಕ್ರಿಕೆಟಿಗರು, ಬ್ಯಾಟು, ಬಾಲು, ನೃತ್ಯ, ಹುಡುಗಿ, ಪ್ರೀತಿ, ವಿರಸ, ಬೇಗುದಿ ಹೀಗೆ ಎಲ್ಲವನ್ನೂ ಚಿತ್ರದಲ್ಲಿ ತುರುಕಿಸಲಾಗಿದೆ. ಮ‌ೂರು ಗಂಟೆಗಳ ಸುದೀರ್ಘವಿದ್ದರೂ ನಿಮಗೆಲ್ಲೂ ಬೋರ್ ಎನಿಸದು. ಇಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಕೆಟ್, ಕ್ರಿಕೆಟ್ ಮತ್ತು ಕ್ರಿಕೆಟ್ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ.

IFM
ಖ್ಯಾತ ಕ್ರಿಕೆಟಿಗರಾದ ಬ್ರೆಟ್ ಲೀ, ಮೈಕ್ ಹಸ್ಸಿ, ಶೋಯಿಬ್ ಮಲಿಕ್, ಸೊಹೈಲ್ ತನ್ವೀರ್, ಜಯಸೂರ್ಯ, ಅಜಂತಾ ಮೆಂಡಿಸ್, ಹರಭಜನ್ ಸಿಂಗ್, ರೋಹಿತ್ ಶರ್ಮಾ, ಆರ್.ಪಿ. ಸಿಂಗ್ ಮುಂತಾದವರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವೊಂದು ಅಸಂಬದ್ಧ ದೃಶ್ಯಗಳನ್ನು ಹೊರತುಪಡಿಸಿದರೆ ಚಿತ್ರದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಲಾಗದು. ಈ ಹಿಂದೆ ಬಾಲಿವುಡ್‌ನಲ್ಲಿ ಕ್ರಿಕೆಟ್ ಆಧರಿಸಿ ಬಂದ ಚಿತ್ರಗಳಿಗಿಂತ ಇದನ್ನು ಉತ್ತಮ ಎಂದು ಹೇಳಲು ಯಾವುದೇ ಸಾಕ್ಷ್ಯಗಳು ಬೇಕಾಗಿಲ್ಲ.

ವಿಜಯ್ ಶೇಖಾವತ್ (ಹರ್ಮನ್ ಬಾವೇಜಾ) ರಾಜಸ್ಥಾನದ ಜೈಸ್ಮಲೇರ್ ಹುಡುಗ. ತಂದೆಯ (ಅನುಪಮ್ ಖೇರ್) ಆಕಾಂಕ್ಷೆಯಂತೆ ಬಹಳ ಕಷ್ಟಪಟ್ಟು ಭಾರತೀಯ ಕ್ರಿಕೆಟ್ ತಂಡ ಸೇರಿಕೊಂಡಿರುತ್ತಾನೆ. ತನ್ನ ಪದಾರ್ಪಣೆ ಪಂದ್ಯದಲ್ಲೇ ಭರವಸೆ ಹುಟ್ಟಿಸುವುದಲ್ಲದೆ ಅಭಿಮಾನಿಗಳನ್ನು ಗಳಿಸುವ ಆತನ ಹಿಂದೆ ಹಲವಾರು ಜಾಹೀರಾತು ಕಂಪನಿಗಳು ಬರುತ್ತವೆ. ಜತೆಗೆ ಧನಲಾಭದ ಅನೇಕ ಒಪ್ಪಂದಗಳಿಗೆ ವಿಜಯ್ ಸಹಿ ಹಾಕುತ್ತಾನೆ. ಅವನ ಬ್ಯಾಟುಗಳಿಗೆ ಮಣಿಯದ ತಂಡಗಳೇ ಇಲ್ಲ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್‌ಇಂಡೀಸ್ ತಂಡಗಳು ವಿಜಯ್‌ಗೆ ಲೆಕ್ಕಕ್ಕೇ ಇಲ್ಲ. ಬ್ಯಾಟು ಬೀಸಿದರೆ ಅದು ಬೌಂಡರಿ ಅಥವಾ ಸಿಕ್ಸರ್.
IFM
ಈ ರೀತಿ ಯಶಸ್ಸಿನ ಉತ್ತುಂಗದಲ್ಲಿದ್ದ ವಿಜಯ್ ಎಲ್ಲರಂತೆ ನಂದಿನಿ (ಅಮೃತಾ ರಾವ್) ಜತೆ ಪ್ರೀತಿಯಲ್ಲಿ ಬೀಳುತ್ತಾನೆ. ಯಶಸ್ಸಿನ ಮದವೇರಿ ಕೈಗೆ ಥೈಲಿ ಬಂದ ಕಾರಣ ಜೀವನ ಶೈಲಿಯೂ ಮಟ್ಟವೂ ಬದಲಾಗುತ್ತದೆ. ಇದರಿಂದಾಗಿ ಆಟದತ್ತ ಗಮನ ಕೊಡದೆ ಲಯ ಕಳೆದುಕೊಳ್ಳ ಲಾರಂಭಿಸುತ್ತಾನೆ. ಪರಿಣಾಮ ಆಯ್ಕೆಗಾರರಿಂದ ವಿಜಯ್ ನಿರ್ಲಕ್ಷ್ಯಕ್ಕೊಳಗಾಗುತ್ತಾನೆ. ಜಾಹೀರಾತು ಕಂಪನಿಗಳು ಇವನತ್ತ ತಿರುಗಿಯೂ ನೋಡುವುದಿಲ್ಲ. ಇದರಿಂದ ನೊಂದುಕೊಂಡ ರೋಗಿಷ್ಠ ತಂದೆಗೆ ಹೃದಯಾಘಾತವಾಗುತ್ತದೆ. ಇಷ್ಟೆಲ್ಲ ಸಮಸ್ಯೆಗಳೆದುರಾದಾಗ ವಾಸ್ತವಕ್ಕೆ ಬರುವ ವಿಜಯ್ ಮತ್ತೆ ಆಟದತ್ತ ಗಮನ ಕೊಡುತ್ತಾನೆ. ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ತಂಡಕ್ಕೆ ಮರಳುವ ಬಗ್ಗೆ ತಯಾರಿ ನಡೆಸುತ್ತಾನೆ. ಆಯ್ಕೆಗಾರರ ಗಮನ ಸೆಳೆದು ಮತ್ತೆ ತಂಡಕ್ಕೆ ಸೇರಿದ ವಿಜಯ್ ಪಂದ್ಯವೊಂದರಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದರೂ ಆಯ್ಕೆಯಾಗಿ ಭಾರತವನ್ನು ಗೆಲ್ಲಿಸುತ್ತಾನೆ.

ಇಲ್ಲಿ ಅಮೃತಾ ರಾವ್ ನೈಜ ಗೆಳತಿ, ಪ್ರಿಯತಮೆಯಾಗಿ ಚಿತ್ರದುದ್ದಕ್ಕೂ ವಿಜಯ್‌ನ ಬೆನ್ನೆಲುಬಾಗಿ ಕಾಣಿಸುತ್ತಾಳೆ. ತಂದೆಯ ಪಾತ್ರ ಮೊದಲಾರ್ಧದಲ್ಲಿ ಸಂತೋಷ ಹಾಗೂ ನಂತರದ ಭಾಗದಲ್ಲಿ ವ್ಯಥೆಯಲ್ಲಿ ಕಳೆದುಹೊಗುತ್ತದೆ. ಚಿತ್ರದಲ್ಲಿ ಪ್ರಮುಖವಾಗಿ ಕಂಡು ಬರುವ ನಕಾರಾತ್ಮಕ ಅಂಶಗಳೆಂದರೆ ಸೆಂಟಿಮೆಂಟ್ ದೃಶ್ಯಗಳು. ಜತೆಗೆ ಡ್ರೆಸ್ಸಿಂಗ್ ರೂಮ್ ತೋರಿಸುವ ರೀತಿ, ಆಯ್ಕೆಗಾರರ ಬಗೆಗಿನ ಚಿತ್ರಣ ಹಾಸ್ಯಾಸ್ಪದವೆನಿಸುತ್ತದೆ.
IFM
ಸಂಗೀತದ ಬಗ್ಗೆ ಉತ್ತಮ ಅಭಿಪ್ರಾಯ ಮ‌ೂಡುವಂತಹ ಯಾವುದೇ ಹಾಡುಗಳು ಕೇಳಿಸುವುದಿಲ್ಲ. ಹಾಗಾಗಿ ಕಡಿಮೆ ಹಾಡುಗಳನ್ನು ಚಿತ್ರ ಒಳಗೊಂಡಿರುವುದು ಸಮಾಧಾನ. ಸಂಭಾಷಣೆ ಬಗ್ಗೆಯೂ ಉತ್ತಮ ಅಭಿಪ್ರಾಯ ಹೇಳಲಾಗದು.

ಕ್ರಿಕೆಟ್ ಆಟಗಾರನಾಗಿ ನಟಿಸಿರುವ ಹರ್ಮನ್ ಬಾವೇಜಾ ನಿಜಕ್ಕೂ ಟೀಮ್ ಇಂಡಿಯಾದಲ್ಲಿರಬೇಕಿತ್ತು ಎಂದನಿಸುತ್ತದೆ ! 24ರ ಹರೆಯದ ಆಟಗಾರ ಚಿತ್ರದುದ್ದಕ್ಕೂ ಮುದಗೊಳಿಸುತ್ತಲೇ ಸಾಗುತ್ತಾನೆ. ಹೃತಿಕ್‌ನಂತೆ ನೋಟ ಮಾತ್ರವಲ್ಲ, ಕುಣಿಯಲೂ ಸಾಧ್ಯ ಎಂಬುದನ್ನು ಮತ್ತೆ ನಿರೂಪಿಸಿದ್ದಾನೆ ಬಾವೇಜಾ. ಶ್ರೀಲಂಕಾ ಮತ್ತು ಭಾರತದ ನಡುವಿನ ಏಕದಿನ ಪಂದ್ಯ ಇಲ್ಲದಿದ್ದಾಗ ಒಂದು ಸಲ ನೋಡಬಹುದು !

IFM