ಅಲಾದಿನ್: ಅಲಾವುದ್ದೀನನ ಮಾಂತ್ರಿಕ ದೀಪ ಬೆಳಗಲಿಲ್ಲ

ಶುಕ್ರವಾರ, 30 ಅಕ್ಟೋಬರ್ 2009 (13:18 IST)
IFM
ಚಿತ್ರ- ಅಲಾದಿನ್.
ನಿರ್ದೇಶನ- ಸುಜಯ್ ಘೋಷ್.
ತಾರಾಗಣ- ರಿತೇಶ್ ದೇಶ್‌ಮುಖ್, ಜಾಕ್ವಿಲಿನ್ ಫೆರ್ನಾಂಡಿಸ್, ಅಮಿತಾಬ್ ಬಚ್ಚನ್, ಸಂಜಯ್ ದತ್

ಬಹಳಷ್ಟು ಕಥೆಗಳು ಓದಲಷ್ಟೆ ಚೆನ್ನಾಗಿರುತ್ತವೆ. ಆದರೆ ಅವನ್ನು ದೃಶ್ಯ ಮಾಧ್ಯಮಕ್ಕೆ ಒಗ್ಗಿಸಿಕೊಳ್ಳುವಷ್ಟರಲ್ಲಿ ಸೋಲುತ್ತವೆ. ಸುಜಯ್ ಘೋಷ್ ಅವರ ಅಲಾದಿನ್ ಚಿತ್ರವೂ ಅಷ್ಟೇ. ಇದರ ಕಥೆಯನ್ನು ಮೊದಲೇ ಕೇಳಿದವರಿಗೆ ಅದ್ಭುತ ಅನಿಸಿರಬಹುದು. ಆದರೆ, ಚಿತ್ರವಾಗಿ ಬಂದಾಗ ಮೂರು ಗಂಟೆ ಚಿತ್ರಮಂದಿರದಲ್ಲಿ ಕೂರೋದೇ ಕಷ್ಟ ಅನಿಸಿಬಿಡುತ್ತದೆ. ಅಲಾದಿನ್ ನೋಡಲ ಶುರು ಮಾಡಿದ ಕೇವಲ 15 ನಿಮಿಷದಲ್ಲಿ ಪ್ರೇಕ್ಷಕನಿಗೆ ಅರ್ಥವಾಗಿಬಿಡುತ್ತದೆ, ಈ ಕಥೆಯಲ್ಲಿ ಆತ್ಮವೇ ಇಲ್ಲವೆಂಬುದು.

ಅಲಾದಿನ್ ಚಟರ್ಜಿ (ರಿತೇಶ್ ದೇಶ್‌ಮುಖ್) ಒಬ್ಬ ಅನಾಥ. ನಗರದಲ್ಲಿ ಈತನ ಜೀವ. ತನ್ನ ಬಾಲ್ಯದ ಒಡನಾಡಿಗಳ ಗುಂಪೂ ಕೂಡ ಇವನ ಬೆನ್ನಿಗಂಟಿಕೊಂಡೇ ಇರುತ್ತದೆ. ಆತನ ಜೀವನದಲ್ಲಿ ಜಾಸ್ಮಿನ್ (ಜಾಕ್ವಿಲಿನ್ ಫೆರ್ನಾಂಡಿಸ್) ಎಂಬ ಹುಡುಗಿಯ ಪ್ರವೇಶವಾದಾಗ ಆತನ ಜೀವನ ಬದಲಾವಣೆ ಕಾಣುತ್ತದೆ. ಜಾಸ್ಮಿನ್ ಅಲಾದಿನ್‌ಗೆ ಮಾಂತ್ರಿಕ ದೀಪವನ್ನು ಕೊಡುತ್ತಾಳೆ. ಅಲ್ಲಿಂದ ಅಲಾದೀನ್ ಜೀವನ ಬದಲಾಗುತ್ತಾ ಸಾಗುತ್ತದೆ. ಜೀನಿಯಸ್ (ಅಮಿತಾಬ್ ಬಚ್ಚನ್) ಮಾಂತ್ರಿಕ ದೀಪದಿಂದ ಮೂರು ವರವನ್ನು ಬಯಸಿ ತನ್ನ ಸಂಬಂಧವನ್ನು ಮಾಂತ್ರಿಕ ದೀಪದೊಂದಿಗೆ ಕಡಿದುಕೊಳ್ಳಲು ಬಯಸುತ್ತಾನೆ. ಆಗ ದೀಪ ಅಲಾದಿನ್ ಕೈ ಸೇರಿರುತ್ತದೆ. ಆದರೆ ಇನ್ನೊಬ್ಬ ಮಾಜಿ-ಜೀನಿಯಸ್ ರಿಂಗ್ ಮಾಸ್ಟರ್ (ಸಂಜಯ್ ದತ್) ಅಲಾದಿನ್‌ನನ್ನು ಕೊಲ್ಲಲು ಬರುತ್ತಾನೆ. ರಿಂಗ್ ಮಾಸ್ಟರ್ ಅಲಾದಿನ್ ವಿರುದ್ಧ ಕೊಲ್ಲಲು ಯಾಕೆ ಬರುತ್ತಾನೆ ಎಂಬುದು ಕಥೆಯಲ್ಲಿದೆ.
IFM


ಚಿತ್ರ ಆರಂಭವಾದಾಗ ಅಲಾದಿನ್ ಭರವಸೆಯನ್ನು ಹುಟ್ಟುಹಾಕುತ್ತದೆ. ಅಬ್ಬರದ ಸಂಗೀತದೊಂದಿಗೆ ಚಿತ್ರ ಆರಂಭವಾದರೆ, ನಂತರ ಚಿತ್ರ ಕೆಳಮುಖವಾಗಿ ಸಾಗುತ್ತದೆ. ಚಿತ್ರದಲ್ಲಿ ಹಲವೆಡೆ ಇಂಟರೆಸ್ಟಿಂಗ್ ಭಾಗಗಳು ಬಂದರೂ, ಮನಗೆಲ್ಲುವಲ್ಲಿ ಸೋಲುತ್ತದೆ.

ಚಿತ್ರದ ಸೋಲಿಗೆ ನಿಜಕ್ಕೂ ಕಥೆ ಕಾರಣವಲ್ಲ. ಉತ್ತಮ ಕಥೆಯೇ ಇಲ್ಲಿದೆ. ಆದರೆ ಚಿತ್ರಕಥೆ ಹೆಣೆದಿರುವುದೇ ಸರಿಯಾಗಿಲ್ಲ. ಕೆಲವೆಡೆ ಸತ್ಯಕ್ಕೆ ನಿಲುಕದ ಸಂಗತಿಗಳನ್ನು ತೂರಿಸಲಾಗಿದೆ. ಇದಕ್ಕೊಂದು ತಾಜಾ ಉದಾಹರಣೆ, ಅಲಾದಿನ್ ತನ್ನ ಅಪ್ಪ- ಅಮ್ಮನನ್ನು ಕಳೆದುಕೊಳ್ಳಲು ಕಾರಣ. ಆ ಕಾರಣ ಸಕಾರಣವಾಗೋದಿಲ್ಲ ಹಾಗೂ ಪ್ರೇಕ್ಷಕರನ್ನು ಮೆಚ್ಚಿಸೋದಿಲ್ಲ.

IFM
ಚಿತ್ರದ ಕ್ಲೈಮ್ಯಾಕ್ಸ್ ಕೂಡಾ ಅಷ್ಟೆ. ಅಮಿತಾಬ್ ಬಚ್ಚನ್ ಪಾತ್ರ ತುಂಬ ಗಿಮಿಕ್ ಮಾಡಿದಂತೆ ಅನಿಸುತ್ತದೆ. ಅಷ್ಟೇ ಅಲ್ಲ, ಅಮಿತಾಬ್ ಬಚ್ಚನ್ ಒಬ್ಬೇ ಸಂಜಯ್ ದತ್ ಅವರ ಸೈನ್ಯದ ಜತೆ ಹೋರಾಡುವ ದೃಶ್ಯ ಅಷ್ಟಾಗಿ ಪ್ಲೀಸ್ ಮಾಡೋದಿಲ್ಲ.

ಸುಜಯ್ ಘೋಷ್ ಅವರ ಚಿತ್ರಕಥೆ-ಸಂಭಾಷಣೆ ಚೆನ್ನಾಗಿಲ್ಲ ಅನ್ನೋದೇ ಚಿತ್ರದ ನೆಗೆಟಿವ್ ಅಂಶ. ಆದರೂ, ಚಿತ್ರ ವಿಶುವಲ್ ಎಫೆಕ್ಟ್ ಹಲವು ಸನ್ನಿವೇಶಗಳಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ವಿಸಾಲ್- ಶೇಖರ್ ಅವರ ಸಂಗೀತ ಒಕೆ, ಕೇಳಬಹುದು. ಸಿನೆಮ್ಯಾಟೋಗ್ರಫಿ ಸೂಪರ್. ಒಟ್ಟಾರೆ ಅಲಾದಿನ್ ಕಥೆಯನ್ನು ಸಂಪೂರ್ಣವಾಗಿ ಆಕ್ರಮಿಸುವುದು ರಿತೇಶ್ ದೇಶ್‌ಮುಖ್. ರಿತೇಶ್ ತಮಗೆ ಅದ್ಭುತವಾಗಿ ಗಂಭೀರವಾಗಿಯೂ ನಟಿಸೋದು ಗೊತ್ತು ಎಂದು ಮತ್ತೊಮ್ಮೆ ಸಾಬೀತುಗೊಳಿಸುತ್ತಾರೆ. ಅಮಿತಾಬ್ ಬಚ್ಚನ್ ತಮಗೊದಗಿಸಿದ ಪಾತ್ರವ್ನನು ಅಚ್ಚುಕಟ್ಟಾಗಿ, ಅಷ್ಟೇ ಸುಂದರವಾಗಿ ಅದ್ಭುತವಾಗಿ ನಿಭಾಯಿಸಿದ್ದಾರೆ. ಜ್ಯಾಕ್ವಿಲಿನ್ ಫೆರ್ನಾಂಡಿಸ್‌ಗೆ ಕಥೆಯಲ್ಲಿ ಅಂಥಾ ಸ್ಕೋಪ್ ಇಲ್ಲ. ಆದರೆ ಆಕೆ ಅದ್ಭುತ ಸುಂದರಿ ಎಂಬುದು ಚಿತ್ರದ ಮೂಲಕ ಸಾಬೀತಾಗುತ್ತದೆ. ಒಟ್ಟಾರೆ, ಅಲಾದಿನ್ ನೋಡೋದು ವೇಸ್ಟ್ ಆಫ್ ಟೈಮ್ ಅನ್ನದೆ ವಿಧಿಯಿಲ್ಲ.

ವೆಬ್ದುನಿಯಾವನ್ನು ಓದಿ