ಮೈಸೂರು ದಸರಾವೆಂಬ ದೃಶ್ಯಕಾವ್ಯ

ಚಂದ್ರಾವತಿ ಬಡ್ಡಡ್ಕ
NRB
ದುಷ್ಟಶಕ್ತಿಯ ಸಂಹಾರದ ಸಂಕೇತ ದಸರಾ ಆಚರಣೆ. ತಾಯಿ ಚಾಮುಂಡೇಶ್ವರಿ ಮಹಿಷಾಸುರನ ವಿರುದ್ಧ ಸಾಧಿಸಿದ ವಿಜಯದ ಆಚರಣೆ ಮೈಸೂರು ದಸರಾ ಎಂದು ಪುರಾಣಗಳು ಹೇಳುತ್ತವೆ. ಜಗದ್ವಿಖ್ಯಾತಿಯ ಮೈಸೂರು ದಸರಾ ಆಚರಣೆಗೆ ಶತಮಾನಗಳ ಇತಿಹಾಸ ಇದೆ. ಮೈಸೂರು ದಸರಾ ಮೈಸೂರು ಜನಜೀವನದ ಒಂದು ಭಾಗವೇ ಆಗಿ ಹೋಗಿದೆ. ಈ ದಸರಾ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಇದೀಗ ಅದು ಕರ್ನಾಟಕದ ನಾಡಹಬ್ಬವಾಗಿ ಆಚರಿಸಲ್ಪಡುತ್ತಿದೆ.

ಕರ್ನಾಟಕದಲ್ಲಿ ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ದಸರಾ ಆಚರಣೆಗೆ ಅಂಕಿತ ಹಾಡಲಾಯಿತು. ಬಳಿಕ ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ನಾಡಹಬ್ಬವಾಯಿತು. ಇಂದಿಗೂ ಆ ಸಂಸ್ಕೃತಿ ಅತ್ಯಂತ ಅದ್ದೂರಿಯಿಂದ ಮುಂದುವರಿದಿದ್ದು, ಸರಕಾರ ಈ ಆಚರಣೆಯ ಉಸ್ತುವಾರಿ ವಹಿಸಿಕೊಂಡಿದೆ.

ರಾಜಮನೆತನ ಒಡೆಯರ ಕುಲದೇವತೆ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭಗೊಳ್ಳುವ ದಸರಾ ಅತ್ಯಂತ ವೈಭವೋಪೇತವಾಗಿ ಹತ್ತುದಿನಗಳ ಕಾಲ ಮುಂದುವರಿಯುತ್ತದೆ. ಹತ್ತುದಿನಗಳ ಕಾಲ ಮನೆಗಳು ಅಂಗಡಿ ಮುಂಗಟ್ಟುಗಳು ವಿಶೇಷ ದೀಪಾಲಂಕಾರಗಳೊಂದಿಗೆ ಕಂಗೊಳಿಸುತ್ತವೆ. ಉಜ್ವಲ ಕಾಂತಿಯಿಂದ ಕಂಗೊಳಿಸುವ ಅರಮನೆಯದ್ದು ಬೇರೆಯೇ ಸೆಳೆತ. ಈ ಅವಧಿಯಲ್ಲಿ ಅರಮನೆ ಎದುರಿನಲ್ಲಿ ವೈವಿಧ್ಯಮಯ ಸಂಗೀತ ಕಾರ್ಯಕ್ರಮ ನಡೆಯುತ್ತದೆ. ದಸರಾ ವೇಳೆ ಅರಮನೆಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಮುಕ್ತವಾಗಿರಿಸಲಾಗುತ್ತದೆ. ದಸರಾ ಅಂಗವಾಗಿ ರಾಜ್ಯ ಸರಕಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಸ್ತಿ ಮತ್ತು ಕ್ರೀಡಾ ಸ್ಫರ್ಧೆಗಳನ್ನು ಏರ್ಪಡಿಸುತ್ತದೆ.

NRB
ಮೈಸೂರಿನಲ್ಲಿರುವ ವಿವಿಧ ದೇವಾಲಯಗಳಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ವಿಶೇಷವಾಗಿ ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ವಿವಿಧ ಪೂಜೆಪುನಸ್ಕಾರಗಳು ಭಕ್ತರನ್ನು ಆಹ್ವಾನಿಸುತ್ತವೆ.

ಜಂಬೂಸವಾರಿ: ಮೈಸೂರು ದಸರಾದ ವಿಶೇಷ ಆಕರ್ಷಣೆ ಜಂಬೂ ಸವಾರಿ. ಇದು ದಸರಾದ ಹತ್ತನೆ ದಿನದಂದು ನಡೆಯುತ್ತದೆ. ಅಂದು ಅಪರಾಹ್ನ ಅರಮನೆಯ ಅಂಗಳದಿಂದ ಹೊರಡುವ ಈ ಅತ್ಯಾಕರ್ಷಕ ಮೆರವಣಿಗೆ ಸುಮಾರು 2.5 ಮೈಲಿ ಸಾಗಿ ಬನ್ನಿ ಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸುವುದರೊಂದಿಗೆ ಕೊನೆಗೊಳ್ಳುತ್ತದೆ.

ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ಕುಳ್ಳಿರಿಸಿ ಸಾಲಂಕೃತ ಆನೆಯ ಮೇಲಿರಿಸಿ ಒಯ್ಯಲಾಗುತ್ತದೆ. ಇದು ಮೆರವಣಿಗೆಯ ಪ್ರಮುಖ ಆಕರ್ಷಣೆ. ಅಂಬಾರಿ ಹೊತ್ತ ಆನೆ ಮತ್ತು ಅದರ ಸಂಗಾತಿಗಳದ್ದು ಗಜಗಾಂಭೀರ್ಯದ ನಡಿಗೆ.

ಇದಲ್ಲದೆ ನಾಡಿನಾದ್ಯಂತದ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಸ್ತಬ್ಧಚಿತ್ರಗಳು, ಪೊಲೀಸ್ ಬ್ಯಾಂಡ್, ಜಾನಪದೀಯ ಪ್ರದರ್ಶನಗಳು ದಸರಾ ಮೆರವಣಿಗೆಗೆ ತಮ್ಮವೇ ಆದ ಮೆರುಗು ನೀಡುತ್ತವೆ. ಈ ಮೆರವಣಿಗೆಯ ವೀಕ್ಷಣೆಗೆ ಜನತೆ ರಸ್ತೆಗಳ ಇಕ್ಕೆಲಗಳಲ್ಲಿ ಕಾದು ನಿಂತಿರುತ್ತಾರೆ. ಸೂಕ್ತ ಜಾಗ ಸಿಗದ ಮಂದಿ ಸಿಕ್ಕಸಿಕ್ಕ ವಾಹನ, ಕಟ್ಟಡಗಳು, ಗಿಡಮರಗಳನ್ನು ಏರಿರುತ್ತಾರೆ. ಉಪಗ್ರಹ ತಂತ್ರಜ್ಞಾನದ ಅಭಿವೃದ್ದಿ ಜನತೆ ಈ ದಸರಾ ವೈಭವನ್ನು ಇಂದಿನ ದಿನಗಳಲ್ಲಿ ತಮ್ಮ ಮನೆಯಲ್ಲೇ ಕುಳಿತು ದೂರದರ್ಶನಗಳ ಮೂಲಕ ವೀಕ್ಷೀಸು ಅವಕಾಶವನ್ನು ತಂದಿಟ್ಟಿವೆ.

ಖಾಸಗೀ ದರ್ಬಾರ್:
NRB
ಒಡೆಯರ್ ಮನೆತನದ ಸಿಂಹಾಸನ ಪೂಜಾ ವಿಧಿವಿಧಾನ ಬಳಿಕ ರಾಜರು ಸಿಂಹಾಸನವನ್ನೇರಿ ಖಾಸಗೀ ದರ್ಬಾರ್ ನಡೆಸುತ್ತಾರೆ. ಸುಮಾರು ನಾಲ್ಕು ಟನ್ ತೂಗುವ ರತ್ನ ಖಚಿತ ಸ್ವರ್ಣ ಸಿಂಹಾಸನದಲ್ಲಿ ಆಸೀನರಾಗುವ ಒಡೆಯರ್ ಪರಂಪಾರಗತ ಪ್ರಾಚೀನ ರೀತಿನೀತಿಗಳಂತೆಯೇ ದರ್ಬಾರ್ ನಡೆಸುತ್ತಾರೆ. ಇದು ಖಾಸಗೀ ಕಾರ್ಯಕ್ರಮವಾಗಿದ್ದು ಸಾರ್ವಜನಿಕರಿಗೆ ಮುಕ್ತವಲ್ಲ. ದರ್ಬಾರ್ ಹಾಲ್‌ನಲ್ಲಿ ರಾಜಪರಿವಾರದವರು, ರಾಜ ಪುರೋಹಿತರು, ಆಹ್ವಾನಿತ ಅತಿಥಿಗಳು, ದೇವಾಲಯಗಳ ಅರ್ಚಕರು, ಅರಮನೆ ಸೇವಕರು ಭಾಗವಹಿಸುತ್ತಾರೆ. ಇದು ದಸರಾ ವೇಳೆ ನಡೆಸುವ ಅರಸು ಮನೆತನದ ರಾಜಸಂಪ್ರದಾಯದ ಸಾಂಕೇತಿಕ ಆಚರಣೆ.

ದಸರಾ ಆಚರಣೆಯಂಗವಾಗಿ ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ಎರಡು ತಿಂಗಳ ಕಾಲ ವಸ್ತುಪ್ರದರ್ಶನ ನಡೆಯುತ್ತದೆ. ಇದಲ್ಲದೆ ಆಹಾರ ಮತ್ತು ಚಿತ್ರೋತ್ಸವಗಳ ಸಂಘಟನೆಯೂ ಇದೆ. ದಸರಾ ಆಚರಣೆ ನಮ್ಮ ನಾಡಿನ ಆಚರಣೆ, ಸಂಪ್ರದಾಯಗಳ ವೈಭವವನ್ನು ನಮ್ಮ ಮುಂದೆ ತಂಡಿಡುವುದರೊಂದಿಗೆ ಉದ್ಯಮ, ಪ್ರವಾಸೋದ್ಯಮದ ಅಭಿವೃದ್ಧಿಗೂ ಸಾಕಷ್ಟು ಅವಕಾಶಗಳನ್ನು ತಂದಿಟ್ಟಿದೆ.