ಎಲೆಕ್ಷನ್‌ಗೆ ಸ್ಪರ್ಧಿಸಲ್ಲ, ಬಹುಮತ ಬಂದ್ರೆ ಸಿಎಂ ಆಗ್ತೇನೆ!: ಮಮತಾ

ಗುರುವಾರ, 3 ಮಾರ್ಚ್ 2011 (10:25 IST)
ತೃಣಮೂಲ ಕಾಂಗ್ರೆಸ್ ವರಿಷ್ಠೆ, ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲವಂತೆ. ಆದರೆ ಒಂದು ವೇಳೆ ತಮ್ಮ ಪಕ್ಷಕ್ಕೆ ಬಹುಮತ ಬಂದರೆ, ಆರು ತಿಂಗಳೊಳಗೆ ತಾವು ವಿಧಾನಸಭೆಗೆ ಸ್ಪರ್ಧಿಸಿ ಸರಕಾರವನ್ನು ಮುನ್ನಡೆಸುವುದಾಗಿ ತಿಳಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲೇಬೇಕು ಎಂಬ ಕಡ್ಡಾಯ ನಿಯಮವೇನೂ ಇಲ್ಲ. ಸ್ಪರ್ಧಿಸದಿದ್ದರೂ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ನಡೆಸುವುದಾಗಿ ಅವರು ದೆಹಲಿಗೆ ಹೊರಡುವ ಮುನ್ನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.

ನಾನು ಚುನಾವಣೆಯಲ್ಲಿ ನಿಲ್ಲಲೇಬೇಕು ಎಂಬ ಬಯಕೆ ಜನರದ್ದಾಗಿದ್ದರೆ, ನಮ್ಮ ಪಕ್ಷ ಬಹುಮತ ಗಳಿಸಿದ್ದಲ್ಲಿ ನಾನು ಆರು ತಿಂಗಳೊಳಗೆ ವಿಧಾನಸಭೆಗೆ ಸ್ಪರ್ಧಿಸಿ ಅಸೆಂಬ್ಲಿ ಪ್ರವೇಶಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಒಂದು ವೇಳೆ ನಿಮ್ಮ ಪಕ್ಷ ಬಹುಮತ ಪಡೆದು ಮುಂದಿನ ಸರಕಾರ ರಚಿಸಲು ಮುಂದಾದರೆ ನೀವು ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಮಮತಾ, ತಾನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮುಂದಿನ ಆಱು ತಿಂಗಳ ಒಳಗೆ ವಿಧಾನಸಭೆಗೆ ಆಯ್ಕೆಯಾಗುವುದಾಗಿ ವಿವರಣೆ ನೀಡಿದರು.

ಆದರೆ ಇದೀಗ ತಮ್ಮ ಕೆಲಸದ ಮೇಲೆ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದ್ದು, ತಮಗೆ ವಹಿಸಿರುವ ರೈಲ್ವೆ ಇಲಾಖೆಯ ಸಚಿವ ಸ್ಥಾನದ ಹೊಣೆಯನ್ನು ಜವಾಬ್ದಾರಿಯಿಂದ ನಿಭಾಯಿಸುವೆ ಎಂದರು. ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಸಿದ್ದವಾಗಿದೆ ಎಂದು ಹೇಳಿದರು.

ಅಲ್ಲದೇ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯವನ್ನು ಶಾಂತಿಯುತವಾಗಿ ನಡೆಸಬೇಕು ಎಂದು ಎಲ್ಲಾ ಪಕ್ಷಗಳಲ್ಲಿಯೂ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ ಮಮತಾ, ತಾವು ಮಾರ್ಚ್ 8 ಅಥವಾ 9ರಂದು ಬಂಗಾಳಕ್ಕೆ ಆಗಮಿಸಿ ಪ್ರಚಾರ ಕಾರ್ಯ ಆರಂಭಿಸುವುದಾಗಿ ತಿಳಿಸಿದರು.

ವೆಬ್ದುನಿಯಾವನ್ನು ಓದಿ