ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರು ದ್ವಿಪತ್ನಿ ವಲ್ಲಭ ಎನ್ನುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಇದನ್ನು ತನ್ನ ಆಸ್ತಿಯ ಹಂಚಿಕೆಯಲ್ಲೂ ಅವರು ಚಾಚೂ ತಪ್ಪದೆ ಪಾಲಿಸಿದ್ದಾರೆ. ಒಬ್ಬರಿಗೆ ಹೆಚ್ಚು, ಇನ್ನೊಬ್ಬರಿಗೆ ಕಡಿಮೆ ಎನ್ನದೆ ಸರ್ವರಿಗೂ ಸಮಪಾಲು ನೀತಿಯನ್ನು ಸಾರಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ತಿರುವಾರೂರಿನಿಂದ ಸ್ಪರ್ಧಿಸುತ್ತಿರುವ ಕರುಣಾನಿಧಿ ಗುರುವಾರ ತನ್ನ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ತನ್ನ ಆಸ್ತಿ-ಪಾಸ್ತಿ ಕುರಿತು ಚುನಾವಣಾ ಆಯೋಗಕ್ಕೆ ದಾಖಲೆಗಳನ್ನು ನೀಡಿದರು.
ವಾಸ್ತವದಲ್ಲಿ ಕರುಣಾನಿಧಿಯವರು ಮೂರು ಮದುವೆಯಾಗಿದ್ದಾರೆ. ಮೊದಲನೇ ಪತ್ನಿ ಪದ್ಮಾವತಿ ಇಹಲೋಕ ತ್ಯಜಿಸಿದ್ದರೆ, ದಯಾಳು ಅಮ್ಮಾಳ್ ಮತ್ತು ರಜತಿ ಅಮ್ಮಾಳ್ ಮುಖ್ಯಮಂತ್ರಿ ಜತೆ ಸಹಬಾಳ್ವೆ ನಡೆಸುತ್ತಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ಕರುಣಾನಿಧಿ ಹೊಂದಿರುವ ಒಟ್ಟು ಆಸ್ತಿ ಮೌಲ್ಯ 41 ಕೋಟಿ ರೂಪಾಯಿಗಳು. ಅದರಲ್ಲಿ ಅವರ ಪಾಲು 4.92 ಕೋಟಿ ಮಾತ್ರ. ಅದು ಕೂಡ ಬಹುತೇಕ ಬ್ಯಾಂಕ್ ಠೇವಣಿಗಳು.
ಉಳಿದ ಮೊತ್ತವನ್ನು ಅಥವಾ ಆಸ್ತಿಯನ್ನು ಇಬ್ಬರೂ ಪತ್ನಿಯರಿಗೆ ಬಹುತೇಕ ಸರಿಸಮನಾಗಿ ಹಂಚಿಕೆ ಮಾಡಿದ್ದಾರೆ. ದಯಾಳು ಹೆಸರಲ್ಲಿ 17.34 ಹಾಗೂ ರಜತಿ ಹೆಸರಲ್ಲಿ 18.68 ಕೋಟಿ ರೂಪಾಯಿಗಳ ಆಸ್ತಿ-ಪಾಸ್ತಿಗಳಿವೆ.
ಕರುಣಾನಿಧಿಗೆ ಒಟ್ಟು ಆರು ಮಕ್ಕಳು. ಮೊದಲ ಪತ್ನಿ ಪದ್ಮಾವತಿಯಿಂದ ಎಂ.ಕೆ. ಮುತ್ತು, ಎರಡನೇ ಪತ್ನಿ ದಯಾಳುವಿನಿಂದ ಅಳಗಿರಿ, ಸ್ಟಾಲಿನ್, ಸೆಲ್ವಿ ಮತ್ತು ತಮಿಳರಸು ಹಾಗೂ ಕೊನೆಯ ಪತ್ನಿ ರಜತಿಯಿಂದ ಕನಿಮೋಳಿಯನ್ನು ಪಡೆದಿದ್ದಾರೆ.
ಪದ್ಮಾವತಿಯ ನಿಧನದ ನಂತರ 1948ರಲ್ಲಿ ಕರುಣಾನಿಧಿಯವರು ದಯಾಳುವನ್ನು ಮದುವೆಯಾಗಿದ್ದರು. ನಂತರ ವಿಧಾನಸಭೆಯಲ್ಲಿ ಚರ್ಚೆಯೊಂದರ ಸಂದರ್ಭದಲ್ಲಿ ರಜತಿಯ ಕುರಿತು ಸದಸ್ಯರೊಬ್ಬರು ಪ್ರಶ್ನಿಸಿದಾಗ, ಆಕೆ ನನ್ನ ಮಗಳು ಕನಿಮೋಳಿಯ ತಾಯಿ ಎಂದು ಉತ್ತರಿಸಿದ್ದರು. ಸಂಸದೆಯಾಗಿರುವ ಕನಿಮೋಳಿಗೆ ಈಗ 42 ವರ್ಷ.
2009-10ರ ಆದಾಯ ತೆರಿಗೆ ಸಲ್ಲಿಕೆಯಲ್ಲಿ ಕರುಣಾನಿಧಿಯವರು ತನ್ನ ಆದಾಯ 37.3 ಲಕ್ಷ, ದಯಾಳುವಿಗೆ 64.37 ಲಕ್ಷ ಹಾಗೂ ರಜತಿಗೆ 1.67 ಕೋಟಿ ಎಂದು ನಮೂದಿಸಿದ್ದರು.