ಮೈಸೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಗಳ ಆರೋಪಗಳ ತನಿಖೆಗೆ ಪೊಲೀಸ್ ಇಲಾಖೆ ಎಸ್‌ಐಟಿ ರಚಿಸುವಂತೆ ಹೇಳಿದರೆ ಮಾಡುತ್ತೇವೆ. ಈ ಸಂಬಂಧ ಸರ್ಕಾರದ ಮೇಲೆ ಯಾವುದೇ ಒತ್ತಡವಿಲ್ಲ. ಯಾರೇ ಒತ್ತಡ ಹಾಕಿದರೂ, ಯಾರ ಮಾತುಗಳನ್ನೂ ನಾವು ಕೇಳುವುದಿಲ್ಲ. ಎಲ್ಲವನ್ನೂ ಕಾನೂನು ಪ್ರಕಾರವೇ ನಡೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಗಳ ಕುರಿತ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ನೀಡಿರುವ ಹೇಳಿಕೆಗೆ ನಾವು ಪರವೂ ಇಲ್ಲ, ವಿರೋಧವೂ ಇಲ್ಲ ಎಂದರು.
ಪೊಲೀಸ್ ಇಲಾಖೆಯವರು ಸಲ್ಲಿಸುವ ವರದಿಯ ಆಧಾರದ ಮೇಲೆ, ಎಸ್‌ಐಟಿ ಮಾಡಬೇಕೆಂಬ ಶಿಫಾರಸು ಬಂದರೆ ರಚಿಸುತ್ತೇವೆ. ಶನಿವಾರದೊಳಗೆ ಎಲ್ಲವೂ ಗೊತ್ತಾಗಲಿದೆ ಎಂದರು.
ಪ್ರಕರಣ ಸಂಬಂಧ ದೂರುದಾರ 10 ವರ್ಷ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರ ಮುಂದೆ ನಾನೇ ಹೂತು ಹಾಕಿದ್ದೇನೆ ಎಂದೆಲ್ಲಾ ಹೇಳಿದ್ದಾನೆ. ಆ ಜಾಗಕ್ಕೆ ಕರೆದುಕೊಂಡು ಹೋದರೆ ಹೆಣಗಳನ್ನು ತೋರಿಸುತ್ತೇನೆ ಎಂದೂ ಹೇಳಿದ್ದಾನೆ. ಪೊಲೀಸರು ಏನು ಹೇಳುತ್ತಾರೆಯೋ ನೋಡೋಣ ಎಂದು ಹೇಳಿದರು.