ಕುಂಬ್ಳೆ: ಬಾಲಕಿಯರಿಗೆ ಆಮಿಷ ತೋರಿಸಿ ಲೈಂಗಿಕ ಪೀಡನೆ

ಬುಧವಾರ, 9 ಮಾರ್ಚ್ 2011 (18:21 IST)
ಕಾಸರಗೋಡು: ಐವತ್ತರ ಹರೆಯದ ಕಾಮುಕ ಲಾಟರಿ ಅಂಗಡಿ ಮಾಲೀಕನೊಬ್ಬ, ಸ್ಥಳೀಯ ವಿದ್ಯಾರ್ಥಿನಿಯರಿಗೆ ಹಣ ಮತ್ತು ಚಾಕೊಲೆಟ್ ಮುಂತಾದ ತಿಂಡಿಯ ಆಮಿಷ ತೋರಿಸಿ, ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಘಟನೆಯೊಂದು ಕುಂಬಳೆಯಿಂದ ವರದಿಯಾಗಿದೆ. ಕಳೆದ ಒಂದು ವರ್ಷದಿಂದ ಆರೋಪಿಯು ಇದುವರೆಗೆ ಆರೋಪಿಯು ಸುಮಾರು 20ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಕಾಸರಗೋಡು ಚೈಲ್ಡ್ ಲೈನ್ ಎಂಬ ಸಮಾಜಸೇವಾ ಸಂಸ್ಥೆಯ ಅಧಿಕಾರಿಗಳು ಈ ಘಟನೆಯನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿನ ಶಾಲೆಯ ಅಧ್ಯಾಪಕರ ನೆರವಿನಿಂದ, ಕೆಲವು ಮಕ್ಕಳ ಚೀಲ ತಪಾಸಣೆ ಮಾಡಿದಾಗ, ಅದರೊಳಗೆ 50, 100 ರೂಪಾಯಿ ನೋಟುಗಳಿರುವುದು ಪತ್ತೆಯಾಗಿತ್ತು. ಈ ಹಣವೆಲ್ಲಿಂದ ಬಂತು ಎಂದು ಕೇಳಿದಾಗ ವಿಷಯ ಬಯಲಿಗೆ ಬಂದಿತ್ತು ಎಂದು ಮೂಲಗಳು ತಿಳಿಸಿದ್ದಾರೆ.

ಅಂಗಡಿ ಮಾಲೀಕ ತಮಗೆ ಹಣ ಕೊಟ್ಟು, ಕರೆಯುತ್ತಿದ್ದ ಮತ್ತು ತಿಂಡಿಯನ್ನೂ ಕೊಡುತ್ತಿದ್ದ ಎಂದು ಕುಂಬಳೆಯ ಸರಕಾರಿ ಅಪ್ಪರ್ ಪ್ರೈಮರಿ ಶಾಲೆಯ ವಿದ್ಯಾರ್ಥಿನಿಯರು ಬಾಯಿಬಿಟ್ಟಿದ್ದಾರೆ.

ಚೈಲ್ಡ್‌ಲೈನ್ ಸ್ವಯಂ ಸೇವಾ ಸಂಸ್ಥೆಯು ಈ ಕುರಿತು ಕಾಸರಗೋಡು ಜಿಲ್ಲಾ ಎಸ್ಪಿಗೆ ದೂರು ನೀಡಿದೆ.

ಈ ನಡುವೆ, ವಿವಿಧ ಪಕ್ಷಗಳಿಗೆ ಸೇರಿದ ಯುವ ಸಂಘಟನೆಗಳು ಈ ಘಟನೆಯನ್ನು ಖಂಡಿಸಿ ಪ್ರತಿಭಟನಾ ಪ್ರದರ್ಶನ ಮಾಡಿದ್ದು, ಆರೋಪಿಯನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿವೆ.

ಇದೇ ವೇಳೆ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಲ್ಪ ಬಲವನ್ನೂ ಪ್ರಯೋಗಿಸಬೇಕಾಯಿತು. ಲಾಟರಿ ಅಂಗಡಿಯನ್ನು ಪುಡಿ ಮಾಡಲು ಹೊರಟಾಗ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಈ ಸಂದರ್ಭ ಕೆಲವು ಮಂದಿಗೆ ಗಾಯಗಳೂ ಆಗಿವೆ.

ವೆಬ್ದುನಿಯಾವನ್ನು ಓದಿ