ಬಹುನಿರೀಕ್ಷಿತ ಜನಗಣತಿಯ ಅಂಕಿ ಅಂಶವು ಗುರುವಾರ ಹೊರಬಿದ್ದಿದ್ದು, ಇದರ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ 121 ಕೋಟಿ. ಪುರುಷರ ಸಂಖ್ಯೆ 62.37 ಕೋಟಿ ಹಾಗೂ ಮಹಿಳೆಯರ ಸಂಖ್ಯೆ 58.65 ಕೋಟಿ. ಆದರೆ ಒಟ್ಟಾರೆ ಅಕ್ಷರಸ್ಥರ ಸಂಖ್ಯೆ ಇನ್ನೂ ಶೇ.38.82 ಮಾತ್ರ!
ಜನಗಣತಿ ಅಂಕಿ ಅಂಶಗಳ ಪ್ರಕಾರ ಪ್ರಮುಖ ಅಂಶಗಳು ಹೀಗಿವೆ
ಲಿಂಗಾನುಪಾತದ ವ್ಯತ್ಯಾಸ ಕಡಿಮೆಯಾಗಿದೆ ಒಳ್ಳೆಯ ಸುದ್ದಿ ಎಂದರೆ, 2001ಕ್ಕೆ ಹೋಲಿಸಿದರೆ ಪುರುಷ ಮತ್ತು ಮಹಿಳಾ ಸಂಖ್ಯೆಯ ಅನುಪಾತದಲ್ಲಿನ ವ್ಯತ್ಯಾಸ ಕಡಿಮೆಯಾಗಿದೆ. 2001ರಲ್ಲಿ 1000 ಪುರುಷರಿಗೆ 933 ಮಹಿಳೆಯರಿದ್ದರೆ (ವ್ಯತ್ಯಾಸ ಸಾವಿರಕ್ಕೆ 67), 2011ರಲ್ಲಿ ಈ ಅನುಪಾತವು 1000: 940ಕ್ಕೆ ಬಂದಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ 60.
ಮಕ್ಕಳಲ್ಲಿ ಲಿಂಗಾನುಪಾತ ವ್ಯತ್ಯಾಸ ಹೆಚ್ಚು ಆತಂಕದ ವಿಷಯವೆಂದರೆ ಮಕ್ಕಳ ಲಿಂಗಾನುಪಾತದಲ್ಲಿ ಹೆಚ್ಚಳ. ಮಕ್ಕಳ ಲಿಂಗಾನುಪಾತವು 1000 ಬಾಲಕರಿಗೆ 927 ಬಾಲಕಿಯರಂತೆ ಇದ್ದದ್ದು 914ಕ್ಕೆ ತಲುಪಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ 73 ಇದ್ದದ್ದು 86ಕ್ಕೆ ಏರಿಕೆಯಾಗಿದೆ. ಮಿಜೋರಾಂ ಮತ್ತು ನಾಗಾಲ್ಯಾಂಡ್ನಲ್ಲಿ ಮಕ್ಕಳ ಲಿಂಗಾನುಪಾತ ಗರಿಷ್ಠವಾಗಿದ್ದರೆ, ಪಂಜಾಬ್ ಮತ್ತು ಹರ್ಯಾಣದಲ್ಲಿ ಕನಿಷ್ಠವಿದೆ. ಇದು ಸ್ವಾತಂತ್ರ್ಯಾನಂತರದ ಅವಧಿಯಲ್ಲೇ ಅತ್ಯಂತ ಕನಿಷ್ಠ.
ನಾವೇಕೆ ಬಡವರು... ಭಾರತದ ಜನಸಂಖ್ಯೆಯು ಯುಎಸ್ಎ, ಇಂಡೋನೇಷ್ಯಾ, ಬ್ರೆಜಿಲ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳನ್ನು ಸೇರಿಸಿದರೆ ಎಷ್ಟಿರುತ್ತದೋ ಅಷ್ಟು.
ಉತ್ತರ ಪ್ರದೇಶ ಅತ್ಯಂತ ಹೆಚ್ಚು ಜನಸಾಂದ್ರತೆಯುಳ್ಳ ರಾಜ್ಯವಾಗಿದ್ದು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಜನಸಂಖ್ಯೆಗಳನ್ನು ಸೇರಿಸಿದರೆ (31 ಕೋಟಿ), ಅದು ಯುಎಸ್ಎ ಜನಸಂಖ್ಯೆಗಿಂತಲೂ ಹೆಚ್ಚಾಗುತ್ತದೆ. ಅಮೆರಿಕನ್ನರು ನಮಗಿಂತ ಶ್ರೀಮಂತರು ಯಾಕೆ ಎಂಬುದು ಗೊತ್ತಾಯಿತಲ್ಲವೇ?
ಜನಸಂಖ್ಯಾ ವೃದ್ಧಿಯ ತೀವ್ರತೆ ಕುಸಿತ ಹಿಂದಿನ ಜನಗಣತಿಯಲ್ಲಿ ಹೊರಬಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ, 2001ರಲ್ಲಿ ಶೇ. 21.15ರಷ್ಟಿದ್ದ ಜನಸಂಖ್ಯಾ ವೃದ್ಧಿ ದರವು 2011ರ ಜನಗಣತಿ ಪ್ರಕಾರ ಶೇ.17.64ಕ್ಕೆ ಕುಸಿದಿದೆ.
ನಾವು ನೂರಿಪ್ಪತ್ತೊಂದು ಕೋಟಿ... ಭಾರತದ ಜನಸಂಖ್ಯೆ 121.02 ಕೋಟಿ. ಪುರುಷರು 62.37 ಕೋಟಿ ಹಾಗೂ ಮಹಿಳೆಯರು 58.65 ಕೋಟಿ. ಒಟ್ಟಾರೆಯಾಗಿ, ಪುರುಷರ ಜನಸಂಖ್ಯೆಯಲ್ಲಿ ಶೇ.17 ಹಾಗೂ ಮಹಿಳೆಯರ ಜನಸಂಖ್ಯೆಯಲ್ಲಿ ಶೇ.18ರಷ್ಟು ವೃದ್ಧಿಯಾಗಿದೆ.
ನಾಗಾಲ್ಯಾಂಡ್ನಲ್ಲಿ ಜನಸಂಖ್ಯೆಯಲ್ಲಿ ಕುಸಿತ ಕಂಡಿದೆ.
ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳವಾದ ಜನಸಂಖ್ಯೆ 18 ಕೋಟಿ. ಅಂದರೆ ಇದು ಬ್ರೆಜಿಲ್ನ ಜನಸಂಖ್ಯೆಗೆ ಸಮ.
ಜನಸಾಂದ್ರತೆ ದೆಹಲಿಯಲ್ಲಿ ಹೆಚ್ಚು, ಅರುಣಾಚಲದಲ್ಲಿ ಕಡಿಮೆ ಜನಸಾಂದ್ರತೆಯು ಕೂಡ ಹೆಚ್ಚಾಗಿದೆ. ಅತೀ ಹೆಚ್ಚು ಜನಸಾಂದ್ರತೆಯಿರುವುದು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ (ಚದರ ಕಿಲೋಮೀಟರಿಗೆ 37,346 ಮಂದಿ), ಅತಿ ಕನಿಷ್ಠ ಜನಸಾಂದ್ರತೆ ಇರುವುದು ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ - ಚದರ ಕಿಲೋಮೀಟರಿಗೆ 1 ಮಾತ್ರ!